ಚಿಕ್ಕಮಗಳೂರು: ಹೊರನಾಡು ಆದಿಶಕ್ತ್ಯಾತ್ಮ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದ ಪುನಃ ಪ್ರತಿಷ್ಠಾಪನಾ ಮಹೋತ್ಸವ, ಕುಂಭಾಭಿಷೇಕ ಹಾಗೂ ರಥೋತ್ಸವ ಕಾರ್ಯಕ್ರಮಗಳು ಏಪ್ರಿಲ್ ೨೨ ರಿಂದ ೨೯ ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿ ಗಿರಿಜಾಶಂಕರ ಜೋಷಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀ ಕ್ಷೇತ್ರದ ಜೀರ್ಣೋದ್ಧಾರವಾಗಿ ೫೦ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಗನ್ಮಾತೆಗೆ ಸಾಮ್ರಾಜ್ಯ ಪಟ್ಟಾಭಿಷೇಕ ಮತ್ತು ಮಹಾ ಕುಂಭಾಭಿಷೇಕ ಕಾರ್ಯಕ್ರಮಗಳೂ ನಡೆಯಲಿದ್ದು, ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಏಪ್ರಿಲ್ ೨೨ ರಂದು ತಾಂತ್ರಿಕರು ಮತ್ತು ಪುರೋಹಿತರ ಆಗಮನವಾಗಲಿದ್ದು, ಜಪಗಳು ಮತ್ತು ಪಾರಾಯಣಗಳು ಆರಂಭವಾಗುತ್ತವೆ. ಅಂದು ಹುಕ್ಕೇರಿ ಮಹಾ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಲಿಸಿದರು.
ಏಪ್ರಿಲ್ ೨೩ ರಂದು ಮಹಾ ಅಭಿಷೇಕ, ವಿವಿಧ ಹೋಮಗಳು, ಕೋಟಿ ಕುಂಕುಮಾರ್ಚನೆ, ಮಹಾ ಮಂಗಳಾರತಿ, ಅಗ್ನಿ ಜನನ ಮತ್ತು ಅಗ್ನಿ ಸಂಸ್ಕಾರ ಕಾರ್ಯಕ್ರಮಗಳು ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾ ಸಂಸ್ಥಾನಮ್ನ ಶ್ರೀ ವಿದ್ಯಾರಣ್ಯ ಭಾರತೀ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಏಪ್ರಿಲ್ ೨೪ ರಂದು ಮಹಾ ಗಣಪತಿ ಹೋವಮದ ಪೂರ್ಣಾಹುತಿ ಮತ್ತು ಉದ್ಭವ ಗಣಪಿತಿ ಸ್ವಾಮಿಗೆ ಮಹಾ ಕುಂಭಾಭಿಷೇಕ ನಡೆಯಲಿದ್ದು, ಹರಿಹರಪುರ ಶ್ರೀ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಏಪ್ರಿಲ್ ೨೫ ರಂದು ನವಗ್ರಹ ಹೋಮದ ಪೂರ್ಣಾಹುತಿ ಮತ್ತು ಕುಂಭಾಭಿಷೇಕ ನಡೆಯಲಿದ್ದು, ತೀರ್ಥಹಳ್ಳಿ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಏಪ್ರಿಲ್ ೨೬ ರಂದು ಶ್ರೀ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಶ್ರೀ ರುದ್ರ ಹೋಮದ ಪೂರ್ಣಾಹುತಿ ಮತ್ತು ಕುಂಭಾಭಿಷೇಕ ನಡೆಯಲಿದ್ದು, ಕುಕ್ಕೆ ಸುಬ್ರಮಣ್ಯ ಶ್ರೀ ಮಠದ ಶ್ರೀ ವಿದ್ಯಾ ಪ್ರಸನ್ನತೀರ್ಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಏಪ್ರಿಲ್ ೨೭ ರಂದು ಆದಿವಾಸ ಹೋಮ, ೧೦೦೮ ಕಲಶ ಸ್ಥಾಪನೆ, ಅಗ್ನಿ ಜನನ ಹಾಗೂ ಅಗ್ನಿ ಸಂಸ್ಕಾರ ಕಾರ್ಯಕ್ರಮಗಳು ನಡೆಯಲಿದೆ. ಅಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನರಸಿಂಹರಾಜಪುರ ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿ ಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸಲಿದ್ದಾರೆ.
ಏಪ್ರಿಲ್ ೨೯ ರಂದು ಸಂಪ್ರೋಕ್ಷಣೆ ಮತ್ತು ಋತ್ವಿಕ್ ಮಂತ್ರಾಕ್ಷತೆ ನಡೆಯಲಿದ್ದು, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾ ಸ್ವಾಮೀಜಿ ಹಾಗೂ ಕೊಪ್ಪದ ಗೌರಿಗದ್ದೆ ಸ್ವರ್ಣಪೀಠಿಕಾ ಆಶ್ರಮದ ಶ್ರೀ ವಿನಯ್ ಗುರೂಜಿ ಸಾನ್ನಿದ್ಯ ವಹಿಸಲಿದ್ದಾರೆ.
ಮೇ ೧೧ ರಂದು ಶ್ರೀ ಜಗನ್ಮಾತೆಯ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಸಾಮ್ರಾಜ್ಯ ಪಟ್ಟಾಭಿಷೇಕ ಸಹಿತ ಮಹಾ ಕುಂಭಾಭಿಷೇಕ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಅಂಗವಾಗಿ ಪ್ರತಿದಿನ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಮಾವಳಿ ಪುಸ್ತಕ ಸಮರ್ಪಣೆ, ಕೋಟಿ ಕುಂಕುಮಾರ್ಚನೆಗಳು ನಡೆಯಲಿದ್ದು ಭಾಗವಹಿಸಲಿರುವ ಭಕ್ತರ ವಸತಿ ವ್ಯವಸ್ಥೆಗಾಗಿ ತುಂಗಾ ನಿವಾಸ ಮತ್ತು ನೇತ್ರಾವತಿ ನಿವಾಸ ಎಂಬ ನೂತನ ವಸತಿಗೃಹಗಳು ಲಭ್ಯವಿರುತ್ತದೆ ಎಂದರು.
Re-consecration festival of Shri Annapooneshwari Temple,