ಕೊಪ್ಪ : ಸತತ ಏಳನೇ ಬಾರಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷದ ಹಿರಿಯ ನಾಯಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಚಿರಋಣಿಯಾಗಿದ್ದೇನೆ. ಹಿಂದುತ್ವಕ್ಕೆ ಬದ್ಧನಾಗಿ ಅಭವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಡಿ.ಎನ್.ಜೀವರಾಜ್ ತಿಳಸಿದರು.
ತಾಲ್ಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿ ವೇದಮೂರ್ತಿಯವರ ಬಳಿ ನಾಮಪತ್ರ ಸಲ್ಲಿಸಿದ ನಂತರ ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈಗಾಗಲೇ ಕ್ಷೇತ್ರದಲ್ಲಿ 13 ಸಮಾವೇಶಗಳನ್ನು ನಡೆಸಿದ್ದೇವೆ. ಆದ್ದರಿಂದ ನಾಮಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಂಡಿದ್ದೇವೆ. ನಾಮಪತ್ರ ಸಲ್ಲಿಸುವ ಮುನ್ನ ನರಸಿಂಹರಾಜಪುರ, ಶೃಂಗೇರಿ ಹಾಗೂ ಕೊಪ್ಪದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ಕ್ಷೇತ್ರದ ಎಲ್ಲಾ ದೇವಸ್ಥಾನಗಳಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ೨೦,೦೦೦ಕ್ಕೂ ಹೆಚ್ಚಿನ ಅಂತರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದರು.
ರಾಮಭಕ್ತನಾಗಿ ಆಯೋದ್ಯೆಯ ಶೀರಾಮ ಮಂದಿರ ನಿರ್ಮಾಣದ ಹೋರಾಟದ ಮೂಲಕ 1989ರಿಂದ ಹಿಂದುತ್ವದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. 1991ರಲ್ಲಿ ನರಸಿಂಹರಾಜಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷನಾಗಿ ನೇಮಕವಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದು 1994ರಲ್ಲಿ ನನ್ನ 29ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಸತತವಾಗಿ 6 ಚುನಾವಣೆಗಳಲ್ಲಿ ಸ್ಪರ್ಧಿಸಿ 3 ಬಾರಿ ಶಾಸಕನಾಗಿ, ವಿಧಾನಸಭಯ ಮುಖ್ಯ ಸಚೇತಕನಾಗಿ, ಮಂತ್ರಿಯಾಗಿ, ಇಬ್ಬರು ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ. 7ನೇ ಬಾರಿಗೆ ಸ್ಪರ್ಧಿಸುವ ಅವಕಾಶವನ್ನು ಬಿಜೆಪಿ ನೀಡಿದೆ.
ಕಳೆದ 14 ವರ್ಷಗಳಲ್ಲಿ ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ನನಗೆ ಶ್ರೀರಕ್ಷೆಯಾಗಿದೆ. ಆಡಳಿತ ಮತ್ತು ವಿರೋಧ ಪಕ್ಷದ ಶಾಸಕನಾಗಿ ಯಾವುದೇ ಸಬೂಬು ಹೇಳದೆ ಕೆಲಸ ಮಾಡಿದ್ದೇನೆ. ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲಮಂತ್ರ, ಅದರ ಜೊತೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡುತ್ತೇನೆ. ಗುಣಮಟ್ಟದ ಕಾಮಗಾರಿ, ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮುಕ್ತ ಜನಸ್ನೇಹಿ ಸೇವೆ ಆದ್ಯತೆ ನೀಡುತ್ತೇನೆ.
ರಾಜ್ಯದಲ್ಲಿ ಬಿಜೆಪಿ ಬಹುಮತದ ಮೂಲಕ ಸರ್ಕಾರ ರಚಿಸಬೇಕು. ಕೇಂದ್ರದಲ್ಲಿ ಮೋದಿಯವರ ಕೈಬಲಪಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು. ಹಿಂದೂ ಪರ ಸಂಘಟನೆಗಳ ಬೆಂಬಲ : ಈ ಬಾರಿ ಶೃಂಗೇರಿ ಕ್ಷೇತ್ರದಲ್ಲಿ ಹಿಂದುತ್ವಕ್ಕೆ ಬದ್ಧತೆ ಅಭಿವೃದ್ಧಿಗೆ ಆದ್ಯತೆ ಘೋಷಣೆಯಡಿ ಚುನಾವಣೆಯನ್ನು ಎದುರಿಸುತ್ತಿದ್ದು ಹಿಂದೂ ಬ್ರಿಗೇಡ್ಸೇರಿದಂತೆ ಎಲ್ಲಾ ಹಿಂದೂ ಪರ ಸಂಘಟನೆಗಳು ವಿಚಾರದ ಆಧಾರದ ಮೇಲೆ ಬಿಜೆಪಿಗೆ ಬೆಂಬಲ ನೀಡುತ್ತವೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸುವ ಸಂದರ್ಭ ಡಿ.ಎನ್.ಜೀವರಾಜ್ಜೊತೆ ಬಿಜೆಪಿ ಮುಖಂಡರಾದ ಬಿ.ಕೆ. ಗಣೇಶ್ರಾವ್, ಧ್ವಾರಮಕ್ಕಿ ಸತೀಶ್, ದೇವೇಂದ್ರ ಅಂದಗಾರ್, ನಿವೇದಿತಾ ಜೀವರಾಜ್ ಇದ್ದರು. ನಾಮಪತ್ರ ಸಲ್ಲಿಸುವ ಸಂದರ್ಭ ತಾಲ್ಲೂಕು ಕಛೇರಿಯ ಹೊರಭಾಗದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಅಭಿಮಾನಿಗಳು ಉತ್ಸಾಹದಿಂದ ನೆರೆದಿದ್ದರು. ಭಾರತ್ಮಾತೆ, ಶ್ರೀರಾಮ, ಬಿಜೆಪಿ, ಮೋದಿ, ಯಡಿಯೂರಪ್ಪ, ಜೀವರಾಜ್ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದು.
D.N. Jeevaraj nomination paper submission