ಚಿಕ್ಕಮಗಳೂರು: ಬಿಜೆಪಿಯ 2ನೇ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡುತ್ತಿದ್ದಂತೆ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಬಿಜೆಪಿಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿ ಅವರು ಜೆಡಿಎಸ್ಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದೂ ತಿಳಿದುಬಂದಿದೆ. ಹಾಗೆ, ಪಕ್ಷಕ್ಕೆ ಗುಡ್ಬೈ ಹೇಳುತ್ತಿದ್ದಂತೆ ಬಿಜೆಪಿ ವಿರುದ್ಧ ಸಮರವನ್ನೂ ಸಾರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿಗೆ ಬಾಗಿಲು ಹಾಕಿಸುವವರೆಗೂ ಸಿ.ಟಿ. ರವಿ ಬಿಡಲ್ಲ ಎಂದಿದ್ದಾರೆ. ಅಲ್ಲದೆ, ತನಗೆ ಟಿಕೆಟ್ ಸಿಗದಿರಲು ಸಹ ಅವರೇ ಕಾರಣ ಎಂದೂ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, ಒಂದು ವೇಳೆ ಬಿ.ಎಸ್. ಯಡಿಯೂರಪ್ಪನವರು ಒಂದು ವಾರ ಫೋನ್ ಸ್ವಿಚ್ ಆಫ್ ಮಾಡಿಕೊಂಡ್ರೆ ಬಿಜೆಪಿಗೆ ಚುನಾವಣೆಯಲ್ಲಿ 50 ಸೀಟ್ ಬರೋದೂ ಡೌಟ್ ಎಂದೂ ಎಮ.ಪಿ. ಕುಮಾರಸ್ವಾಮಿ ಹೇಳಿದ್ದಾರೆ. ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ನೀಡದೆ ದೀಪಕ್ ದೊಡ್ಡಯ್ಯ ಅವರಿಗೆ ನೀಡಲಾಗಿದೆ. ದೀಪಕ್ ದೊಡ್ಡಯ್ಯ ಸಿ.ಟಿ. ರವಿ ಆಪ್ತ ಎನ್ನಲಾಗಿದ್ದು, ಈ ಹಿನ್ನೆಲೆ ತನಗೆ ಟಿಕೆಟ್ ಸಿಗದೆ ಇರುವುದಕ್ಕೆ ಸಿ.ಟಿ. ರವಿ ಕಾರಣ ಎಂಬುದು ಎಂಪಿ. ಕುಮಾರಸ್ವಾಮಿಯವರ ಸಿಟ್ಟಿಗೆ ಕಾರಣವಾಗಿದೆ.
ಪಕ್ಷದ ಬೆಳವಣಿಗೆಗೆ ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಟಿಕೆಟ್ ಸಿಗದ ಬಗ್ಗೆ ನಿರೀಕ್ಷೆ ಮಾಡಿದ್ದೆ ಎಂದೂ ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ ತಿಳಿಸಿದ್ದಾರೆ.
ಈ ಮದ್ಯೆ, ಸಿ.ಟಿ. ರವಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿರೋ ಮೂಡಿಗೆರೆ ಶಾಸಕ ಎಂಪಿ. ಕುಮಾರಸ್ವಾಮಿ ಜೆಡಿಎಸ್ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲದೆ, ರವಿ ವಿರುದ್ಧ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದಲೇ ನಿಲ್ತಾರಾ ಎಂಬ ಮಾತುಗಳೂ ಕೇಳಿಬರುತ್ತವೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ಜತೆ ಎಂ.ಪಿ. ಕುಮಾರಸ್ವಾಮಿ ಸಂಪರ್ಕದಲ್ಲಿದ್ದು, ಇಂದೇ ಜೆಡಿಎಸ್ ಸೇರುವ ಬಗ್ಗೆ ನಿರ್ಧಾರ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
MP said goodbye to BJP. Kumaraswamy