ಚಿಕ್ಕಮಗಳೂರು: ಕಾಯಕದಿಂದಲೇ ಕಳಾಚೈತನ್ಯಶಕ್ತಿ ಎಂಬ ಶ್ರೀರೇಣುಕ ಭಗವತ್ಪಾದರ ಬೋಧನೆ ಪಾಲನೆಯಾದರೆ ಜಗತ್ತು ನೆಮ್ಮದಿಯ ತಾಣವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರು ಅಭಿಪ್ರಾಯಿಸಿದರು.
ಅಜ್ಜಂಪುರ ತಾಲ್ಲೂಕು ಜಂಗಮ ಸಮಾಜದ ನೇತೃತ್ವದಲ್ಲಿ ಶಿವನಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನಿಧ್ಯವಹಿಸಿ ನಿನ್ನೆ ಅವರು ಆಶೀರ್ವಚನ ನೀಡಿದರು.
ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿದಾಗ ಮೋಕ್ಷ ಸಾಧನೆಗೆ ಸಹಕಾರಿಯಾಗುತ್ತದೆ. ಕಾಯಕ ನಿಷ್ಠೆಯಿಂದ ದೇವರಿಗೆ ಹತ್ತಿರವಾಗಬಹುದು. ಜಪ-ತಪ-ಪೂಜೆ-ಸತ್ಯ-ಅಸ್ತ್ಯೆಯ ಇತ್ಯಾದಿ ದಶಧರ್ಮಸೂತ್ರಗಳನ್ನು ಅನುಸರಿಸಿದ್ದೇ ಆದರೆ ಬದುಕು ಸಾರ್ಥಕವಾಗುತ್ತದೆ. ಸಿರಿವಂತಿಕೆಗಿಂತ ಗುಣವಂತಿಕೆ ಬಾಳಿಗೆ ಅಗತ್ಯ. ಜಾತಿಗಿಂತ ನೀತಿ ಮುಖ್ಯ. ಮಾತಿಗಿಂತ ಕೃತಿಲೇಸು. ಬೋಧನೆಗಿಂತ ಸಾಧನೆ ಮುಖ್ಯ. ದಾನಕ್ಕಿಂತ ದಾಸೋಹ ಸರ್ವಶ್ರೇಷ್ಠ ಎಂದ ಜಗದ್ಗುರುಗಳು, ರಾಜ್ಯಸರ್ಕಾರವು ರೇಣುಕರ ಜಯಂತಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಆದಿ ಜಗದ್ಗುರು ಶ್ರೀರೇಣುಕಾಚಾರ್ಯರರು ಒಂದುವರ್ಗ-ಸಮುದಾಯಕ್ಕೆ ಸೀಮಿತರಾದ ಪರಮಾಚಾರ್ಯರು ಅಲ್ಲ. ಬದುಕಿ ಬಾಳುವ ಎಲ್ಲ ಜನಾಂಗದ ಉದ್ಧಾರಕ್ಕೆ ಸದ್ಬೋಧೆ ನೀಡಿದ ಕೀರ್ತಿವಂತರು. ಕೊಲ್ಯನಪಾಕಿಯ ಶ್ರೀಸೋಮೇಶ್ವರ ಲಿಂಗದಲ್ಲಿ ಆವಿರ್ಭವಿಸಿ ಅಲ್ಲೆ ೧೮ಜಾತಿ ಜನಾಂಗದ ಮಠಗಳನ್ನು ಸ್ಥಾಪಿಸಿ ಅವರಿಗೆ ಆಧ್ಯಾತ್ಮದ ಅರಿವು ಮೂಡಿಸಿದವರು. ಮಾತಂಗನಿಗೆ ವೀರಶೈವ ಧರ್ಮದ ಆಚರಣೆಗಳನ್ನು ಬೋಧಿಸಿ ಇಷ್ಟಲಿಂಗಪೂಜೆ ತಿಳಿಸಿ ಮಾತಂಗಋಷಿಯಾಗಿ ಪರಿವರ್ತಿಸಿದ ಗೌರವ ರೇಣುಕರಿಗೆ ಸಲ್ಲುತ್ತದೆ. ಅಗಸ್ತ್ಯಮುನಿಗಳ ಆಶ್ರಮಕ್ಕೆ ಧಾವಿಸಿ ಅವರಿಗೆ ಶಿವಜ್ಞಾನ ಬೋಧಿಸಿದ್ದು ಸಿದ್ಧಾಂತಶಿಖಾಮಣಿಯಾಗಿ ಇಂದು ಪವಿತ್ರ ಧರ್ಮಗ್ರಂಥವಾಗಿ ಮಾರ್ಗದರ್ಶನ ನೀಡುತ್ತಿದೆ ಎಂದರು.
ಸಕಲ ಜೀವಾತ್ಮರಿಗೂ ಲೇಸನ್ನೆ ಬಯಸಿದ ವೀರಶೈವಧರ್ಮ ಅತ್ಯಂತ ಪ್ರಾಚೀನ ಪವಿತ್ರ ಪರಂಪರೆ ಹೊಂದಿದೆ. ಅಂಗ ಲಿಂಗವಾಗುವ, ಜೀವತ್ಮಾ ಪರಮಾತ್ಮನಾಗುವ ಮಾರ್ಗವನ್ನು ಬೋಧಿಸಿ ಸತ್ಯ ಸಿದ್ಧಾಂತದ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ರೇಣುಕಾಚಾರ್ಯರ ತತ್ತ್ವಬೋಧೆಗಳು ಸಾರ್ವಕಾಲಿಕ ಮೌಲ್ಯಯುತವಾದವು ಎಂದು ಶ್ರೀರಂಭಾಪುರಿ ಜಗದ್ಗುರುಗಳು ಅಭಿಪ್ರಾಯಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಬಿ.ಪಿ.ಶಿವಮೂರ್ತಿ ’ವೀರಶೈವ ಸಾಧನ ಮಾರ್ಗ’ ಕುರಿತಂತೆ ವಿಶೇಷ ಉಪನ್ಯಾಸ ನೀಡಿ, ರೇಣುಕಾಚಾರ್ಯರ ಧಾರ್ಮಿಕ, ಸಾಮಾಜಿಕ ಸತ್ಕಾರ್ಯಗಳನ್ನು ಸೂತ್ರರೂಪದಲ್ಲಿ ಮಂಡಿಸಿದರು. ಅ.ಭಾ.ವೀ.ಸಂಸ್ಥೆಯ ಗೌರವಾಧ್ಯಕ್ಷರಾದ ತಾವರೆಕೆರೆ ಶಿಲಾಮಠಾಧ್ಯಕ್ಷ ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ರೇಣುಕ ಭಗವತ್ಪಾದರ ವಿಶ್ವಬಂಧುತ್ವದ ಸಂದೇಶ ನಾಡಿಗೆ ಪಸರಿಸುವ ಮೂಲಕ ಉತ್ತಮ ಸಮಾಜನಿರ್ಮಾಣಕ್ಕೆ ಸಹಕಾರಿಗಳಾಗಬೇಕೆಂದು ಕರೆ ನೀಡಿದರು.
ಹುಲಿಕೆರೆ ದೊಡ್ಡಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಹಿರೇಮಠದ ಶ್ರೀಜಗದೀಶ ಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು, ಬಿಳಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯರು, ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯರು, ನಂದಿಪುರ ಹಿರೇಮಠದ ಶ್ರೀನಂದೀಶ್ವರ ಶಿವಾಚಾರ್ಯರು, ಬೀರೂರು ಶ್ರೀರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಶಿಲಾಮಠದ ಡಾ.ಅಭಿನವಸಿದ್ದಲಿಂಗ ಶಿವಾಚಾರ್ಯರು ಮತ್ತು ಹಣ್ಣೆ ಹಿರೇಮಠದ ಶ್ರೀಮರುಳಸಿದ್ದಪಂಡಿತಾರಾಧ್ಯ ಶಿವಾಚಾರ್ಯರು ವೇದಿಕೆಯಲ್ಲಿದ್ದರು.
ಅ.ಭಾ.ವೀ.ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ತರೀಕೆರೆ ತಾಲ್ಲೂಕು ಬೇಡಜಂಗಮ ಸಂಘದ ಅಧ್ಯಕ್ಷ ಜಿ.ವಿ.ಯೋಗೀಶ್, ಚಿಕ್ಕಮಗಳೂರು ಜಂಗಮಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ಮತ್ತಿತರರು ವೇದಿಕೆಯಲ್ಲಿದ್ದರು. ಡಾ.ಸುಮಾ, ಬಿ.ಎಸ್.ಕಿರಣ್ಕುಮಾರ್, ದೇವಿಕಾ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಅಜ್ಜಂಪುರ ತಾಲ್ಲೂಕು ಜಂಗಮ ಸಮಾಜದ ಅಧ್ಯಕ್ಷ ಎನ್.ವಿ.ಗಂಗಾಧರಯ್ಯ ಪ್ರಾಸ್ತಾವಿಸಿ, ಶ್ರೀಕಂಠಪ್ಪ ಸ್ವಾಗತಿಸಿದರು. ಸಮಾರಂಭಕ್ಕೆ ಮುನ್ನ ಜಗದ್ಗುರುಗಳನ್ನು ಸಾರೋಟದಲ್ಲಿ ಉತ್ಸವದ ಮೂಲಕ ಕಲಾತಂಡಗಳೊಂದಿಗೆ ವೇದಿಕೆಗೆ ಕರೆತರಲಾಯಿತು.
Dr. Weerasomeshwara is a Jagadguru