ಕಡೂರು : ಕಣ್ಣು ಹಾಯಿಸಿದಷ್ಟೂ ಜನಸಾಗರ, ಹಸಿರು ಬಿಳಿ ಟೋಪಿ ಧರಿಸಿ ಬಾವುಟ ಹಿಡಿದವರ ಸಂಭ್ರಮ, ಎತ್ತಿನ ಗಾಡಿಗಳ ನಾಗಾಲೋಟ, ಸಾಂಸ್ಕೃತಿಕ ಕಲಾತಂಡಗಳ ಮೆರಗು, ಪೂರ್ಣಕುಂಭ ಹೊತ್ತ ಸುಮಂಗಲಿಯರು…… ಇದು ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಅವರು ಮಂಗಳವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸೇರಿದ್ದ ಸಾವಿರಾರು ಮಂದಿಯ ಮೆರವಣಿಗೆಯ ಚಿತ್ರಣ.
ಬೆಳಗ್ಗಿನಿಂದಲೇ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುತ್ತಮುತ್ತಲಿನ ಗ್ರಾಮಾಂತರ ಭಾಗದ ರೈತಾಪಿ ಜನ, ಕೂಲಿ ಕಾರ್ಮಿಕರು, ಯುವಜನರು ಜಮಾಯಿಸ ತೊಡಗಿದರು. ಅಲಂಕೃತ ಎತ್ತಿನ ಗಾಡಿಗಳೂ ಕೂಡ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದವು. ಅಭಿಮಾನಿಗಳು, ಕಾರ್ಯಕರ್ತರ ಜಯಘೋಷ ಮುಗಿಲು ಮುಟ್ಟಿತು.
ದತ್ತ ಅವರ ನಾಮಪತ್ರ ಸಲ್ಲಿಕೆಗೆ ಸಾಕ್ಷಿ ಆಗಲು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹೆಲಿಕಾಪ್ಟರ್ ನಲ್ಲಿ ಆಗಮಿಸುವ ಸಂಗತಿ ತಿಳಿದು ಎಪಿಎಂಸಿ ಆವರಣದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್ ಬಳಿಯೂ ಜನರು ಜಮಾಯಿಸಿದ್ದರು.
ಮಧ್ಯಾಹ್ನದ ವೇಳೆಗೆ ಮಾಜಿ ಪ್ರಧಾನಿ ಅವರಿದ್ದ ಹೆಲಿಕಾಪ್ಟರ್ ಎಪಿಎಂಸಿ ಆವರಣದ ಹೆಲಿಪ್ಯಾಡ್ ಗೆ ಬಂದು ಇಳಿಯಿತು. ಜನರು ಹರ್ಷೋದ್ಗಾರದೊಂದಿಗೆ ಮಾಜಿ ಪ್ರಧಾನಿ ಅವರನ್ನು ಬರಮಾಡಿಕೊಂಡರು.
ನಂತರ ಹೊರಟ ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಮುಂದೆ ಸಾಗಿದರೆ ಗೊಂಬೆ ವೇಷಧಾರಿಗಳು, ವೀರಗಾಸೆ, ನಾಸಿಕ್ ಬ್ಯಾಂಡ್ ಕಲಾತಂಡಗಳು ಮುಂದೆ ಸಾಗಿದಂತೆ ಹಿಂದೆ ಜನಸಾಗರವೇ ಹೆಜ್ಜೆ ಹಾಕತೊಡಗಿತು. ಕೊನೆಯಲ್ಲಿ ನೂರಾರು ಅಲಂಕೃತ ಎತ್ತಿನ ಗಾಡಿಯನ್ನು ಚಲಾಯಿಸುವುದ ನಾ ಮುಂದು ತಾ ಮುಂದು ಎಂದು ಒಡಿಸಿಕೊಂಡು ಬಂದರು. ಮೊಟ್ಟಮೊದಲ ಎತ್ತಿನ ಗಾಡಿಯಲ್ಲಿ, ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ, ಏರಿ ಬರುತ್ತಿರುವ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತಿದ್ದರು, ಅಕ್ಕಪಕ್ಕದ ಕಟ್ಟಡಗಳ ಮೇಲೇರಿ ನೋಡುತ್ತಿದ್ದ ಜನರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮೆರವಣಿಗೆ ಸಾಗಿ ತಾಲೂಕು ಕಚೇರಿ ತಲುಪಿತು. ಅದೇ ಸಮಯಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ವಾಹನದ ಮೂಲಕವೇ ತಾಲೂಕು ಕಚೇರಿ ತಲುಪಿದರು.
ಅಲ್ಲಿಗೆ ಬಂದ ದತ್ತ , ಪ್ರಜ್ವಲ್ ರೇವಣ್ಣ, ಮತ್ತು ಮಾಜಿ ಸಚಿವ ಹೆಚ್. ಡಿ. ರೇವಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ಕೆಎಂಎಫ್ ನಿರ್ದೇಶಕ ಬಿದರೆ ಜಗದೀಶ್, ಗಂಗಾಧರ ನಾಯ್ಕ, ಮುಬಾರಕ್ ಅವರೊಂದಿಗಿ ದೇವೇಗೌಡರು ಸೇರಿ ನಾಮಪತ್ರ ವನ್ನು ದ್ವಿಪ್ರತಿಯಲ್ಲಿ ಸಲ್ಲಿಸಿದರು.
ಬಳಿಕ ತಾಲೂಕು ಕಚೇರಿ ಆವರಣದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಮ್ಮ ಮನೆಯ ಮಗನಂತಿರುವ ದತ್ತ ಇಂದು ನಾಮಪತ್ರ ಸಲ್ಲಿಸಿದ್ದಾರೆ, ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಅವರಂತಹ ವಾಗ್ಮಿ ಮತ್ತು ಹಿರಿಯರ ಅಗತ್ಯ ವಿಧಾನಸಭೆಗಿದೆ. ಕಡೂರು ವಿಧಾನಸಭಾ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ತಮ್ಮ ಕುಟುಂಬಕ್ಕೆ ಬಿಡಿಸಲಾಗದ ನಂಟಿದೆ. ನೀವು ನನ್ನನ್ನು ಎರಡು ಬಾರಿ ಲೋಕಸಭೆಗೆ ಕಳುಹಿಸಿದ್ದೀರಿ, ಆ ಋಣಾನುಬಂಧದಿಂದ ಅನಾರೋಗ್ಯದ ನಡುವೆಯೂ ನಿಮ್ಮನ್ನು ನೋಡಲು ಬಂದಿದ್ದೇನೆ, ದತ್ತ ಅವರ ಮೇಲೆಯೂ ಅಭಿಮಾನ ಇದೇ ರೀತಿ ಮುಂದುವರೆಯಲಿ ಎಂದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ತಾವು ಇಂಧನ ಸಚಿವರಾಗಿದ್ದಾಗ ಮತ್ತು ಲೋಕೋಪಯೋಗಿ ಸಚಿವರಾಗಿದ್ದಾಗ ಮಾಡಿಕೊಟ್ಟಿದ್ದೇನೆ, ಈ ಬಾರಿ ಚುನಾವಣೆಯಲ್ಲಿ ದತ್ತ ಅವರನ್ನು ಬೆಂಬಲಿಸಲು ಮನವಿ ಮಾಡಿದರು. ಸಂಸದ ಪ್ರಜ್ವಲ್ ರೇವಣ್ಣ ದತ್ತ ಅವರ ಪರವಾಗಿ ಮತ ಯಾಚಿಸಿದರು. ಜೆಡಿಎಸ್ ಮುಖಂಡರುಗಳಾದ ಪ್ರೇಮಕುಮಾರ್, ಬಾವಿಮನೆ ಮಧು, ಮುಬಾರಕ್, ಮೋಹನ್ ಕುಮಾರ್, ಅನ್ವರ್, ಬೋರ್ವೆಲ್ ರಾಜಣ್ಣ, ಎಸ್. ವಿ. ಉಮಾಪತಿ, ಆನಂದ್, ಗೋವಿಂದಸ್ವಾಮಿ ಮುಂತಾದವರು ಇದ್ದರು.
Submission of nomination by Y.S.V. Dutta