ಕೊಪ್ಪ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸೋಮವಾರ ತಾಲ್ಲೂಕು ಆಡಳಿತ ಸೌಧದಲ್ಲಿನ ಕ್ಷೇತ್ರ ಚುನಾವಣಾಧಿಕಾರಿ ಟಿ.ಆರ್.ವೇದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಿಳಿ ಪಂಚೆ, ಶಲ್ಯ, ಹಸಿರು ಶಾಲು ಹಾಕಿಕೊಂಡು ಪಕ್ಷದ ಕಚೇರಿಯಿಂದ ತಾಲ್ಲೂಕು ಆಡಳಿತ ಸೌಧಕ್ಕೆ ಬೆಳಿಗ್ಗೆ 11 ಗಂಟೆಗೆ ಆಗಮಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸುಧಾಕರ ಶೆಟ್ಟಿ ಅವರ ಪರವಾಗಿ ಹಾಗೂ ಜೆಡಿಎಸ್ ಪಕ್ಷದ ಪರವಾಗಿ ಘೋಷಣೆ ಕೂಗಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಬೆಳಿಗ್ಗೆ ಸುಧಾಕರ ಶೆಟ್ಟಿ ಅವರ ತಂದೆ, ತಾಯಿ ಅವರ ಸಮಾಧಿಗೆ ನಮಿಸಿ ಬಳಿಕ ಪಂಜುರ್ಲಿ, ಕಲ್ಲುರ್ಟಿ, ಜಟಿಗೇಶ್ವರ, ಹಿಂಬರವಳ್ಳಿ ಗಣಪತಿ, ಕೋಪದ ವೀರಭದ್ರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನಾಮಪತ್ರ ಸಲ್ಲಿಸಿದರು.
ಸಹಾಯಕ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ವಿಮಲ ಸುಪ್ರಿಯಾ, ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ಭಂಡಿಗಡಿ ದಿವಾಕರ ಭಟ್, ಕ್ಷೇತ್ರ ಚುನಾವಣಾ ಉಸ್ತುವಾರಿ ಎಚ್.ಜಿ.ವೆಂಕಟೇಶ್, ಕ್ಷೇತ್ರ ಎಸ್ಸಿ ಘಟಕದ ಅಧ್ಯಕ್ಷ ವಾಸಪ್ಪ ಕುಂಚೂರು, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕಣಿವೆ ಇದ್ದರು.
ತಾಲ್ಲೂಕು ಆಡಳಿತ ಸೌಧದ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಅಭ್ಯರ್ಥಿ ಸೇರಿದಂತೆ 5 ಮಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಲು ಪೊಲೀಸರು ಅವಕಾಶ ನೀಡಿದರು. ಸ್ಥಳದಲ್ಲಿ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಇದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸುಧಾಕರ ಶೆಟ್ಟಿ ಪಕ್ಷದ ಕಚೇರಿಗೆ ಬಂದರು. ಈ ವೇಳೆಗೆ ಪಕ್ಷದ ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದ ನಾಗಾಸಾಧುಗಳಿಂದ ಸುಧಾಕರ ಶೆಟ್ಟಿ ಆಶೀರ್ವಾದ ಪಡೆದರು ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
Sudhakar S. Shetty Nomination Paper Submission