ಕಳಸ: ಬಿಜೆಪಿ ಟಿಕೆಟ್ ಸಿಗದೆ ಜೆಡಿಎಸ್ ಸೇರಿರುವ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸ್ಥಳೀಯ ಮುಖಂಡರು ಕಿವಿಮಾತು ಹೇಳುವುದರ ಜೊತೆಗೆ ನಡವಳಿಕೆ ಬದಲಿಸಿಕೊಳ್ಳುವಂತೆ ತಾಕೀತು ಮಾಡಿದರು.
ಪ್ರಾಸ್ತಾವಿಕ ಮಾತನಾಡಿದ ಜೆಡಿಎಸ್ ಧುರೀಣ ಮಂಜಪ್ಪಯ್ಯ, ‘ಜೆಡಿಎಸ್ ಸೇರಿದ್ದರಿಂದ ನೀವು ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಆದರೆ, ಕಳೆದ ಅವಧಿಯಂತೆ ಮಾಡದೆ ಜನರ ಆಶೋತ್ತರಕ್ಕೆ ತಕ್ಕಂತೆ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
‘ಮೂಡಿಗೆರೆ ಕ್ಷೇತ್ರದಲ್ಲಿ ಎಲ್ಲ ಇಲಾಖೆಯಲ್ಲೂ ಅಧಿಕಾರಿಗಳ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಊರು ಕೊಳ್ಳೆ ಹೊಡೆಯುವ ಅಧಿಕಾರಿಗಳಿಗೆ ಇಲ್ಲಿ ಅವಕಾಶ ಕೊಡಬಾರದು. ಭ್ರಷ್ಟಾಚಾರಕ್ಕೆ ಯಾವ ಕಾರಣಕ್ಕೂ ಮಣೆ ಹಾಕಬಾರದು’ ಎಂದೂ ಮಂಜಪ್ಪಯ್ಯ ತಾಕೀತು ಮಾಡಿದರು.
ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜ್ವಾಲನಯ್ಯ ಮಾತನಾಡಿ, ‘ನೀವು ಜೆಡಿಎಸ್ ಪಕ್ಷದ ನಡವಳಿಕೆ ರೂಢಿಸಿಕೊಳ್ಳಬೇಕು. ನಮ್ಮ ಕಾರ್ಯಕರ್ತರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಬೇಕು.ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು.ಆನಂತರ ಕಳಸದ ಯಾವುದೇ ಸಮಸ್ಯೆಗೂ ತಕ್ಷಣ ಸ್ಪಂದಿಸಿ ಕೆಲಸ ಮಾಡಬೇಕು’ ಎಂದರು.
ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ‘ಬಿಜೆಪಿ ನನ್ನನ್ನು ನಡೆಸಿಕೊಂಡ ರೀತಿ ಸರಿ ಇಲ್ಲದ ಕಾರಣಕ್ಕೆ ಪಕ್ಷದಿಂದ ಹೊರ ಬಂದೆ. ನನ್ನ ಜೊತೆಗೆ ಬಿಜೆಪಿಯಲ್ಲಿ ಇದ್ದ ಅನೇಕ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಬರುತ್ತಾರೆ. ಪಕ್ಷಕ್ಕೆ ಬಲ ತುಂಬುತ್ತಾರೆ ಎಂದರು.
ಕುಂಬಳಡಿಕೆಯ ಸಂಜೀವ ಮತ್ತು ಬೆಂಬಲಿಗರು, ಪಟ್ಟಣದ ಕೆಲ ಯುವಕರು ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಮಾತನಾಡಿ, ‘ಮಂಗಳವಾರವಷ್ಟೇ ಪಕ್ಷಕ್ಕೆ ಸೇರಿದ ಅರೇಕೊಡಿಗೆ ಶಿವಣ್ಣ, ಮುಖಂಡರಾದ ಸಂತೋಷ್, ಕೇಶವೇಗೌಡ, ರತ್ನಾಕರಗೌಡ, ಬ್ರಹ್ಮದೇವ, ಭೋಜರಾಜ್, ಆಶಾಲತಾ, ನೀಲಯ್ಯ, ರವಿ,ಸುಜಿತ್, ಅರುಣ್ ಇದ್ದರು.
BJP workers join JDS party