ಚಿಕ್ಕಮಗಳೂರು: ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ ಮೋಸ, ಭ್ರಷ್ಟಾಚಾರಗಳನ್ನು ಜನರ ಮುಂದಿಟ್ಟು ಈ ಬಾರಿ ಚುನಾವಣೆಯಲ್ಲಿ ಮತ ಕೇಳಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಅವರು ಮಂಗಳವಾರ ಚಿಕ್ಕಮಗಳೂರು ಪ್ರೆಸ್ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಮೀಸಲಾತಿ ಹೆಚ್ಚಳ ಮಾಡಲಿಕ್ಕೆ ಕಾಂಗ್ರೆಸಿಗರು ಮೀನ ಮೇಷ ಎಣಿಸಿದರು. ಒಮೀಸಲಾತಿ ನಂಬಿಕೆ ಹುಟ್ಟಿಸಿ ದೋಖಾ ಮಾಡಿದರು. ನಾವು ನಂಬಿಕೆಗೆ ತಕ್ಕಂತೆ ನಡೆದುಕೊಂಡಿದ್ದೇವೆ. ಎಸ್ಸಿ ಮೀಸಲಾತಿಯನ್ನು ಶೇ.೧೫ ಇದ್ದದ್ದನ್ನ ಶೇ.೧೭ ಕ್ಕೆ ಹೆಚ್ಚಳಮಾಡಿದ್ದೇವೆ. ಎಸ್ಟಿ ಮೀಸಲಾತಿಯನ್ನು ಶೇ. ೩ ರಿಂದ ಶೇ.೭ ಕ್ಕೆ ಹೆಚ್ಚಳ ಮಾಡಿ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ ಎಂದರು.
ಒಳ ಮೀಸಲಾತಿ ಒಂದು ಸವಾಲಿನ ಸಂಗತಿ, ಮುಖ್ಯಮಂತ್ರಿಗಳು ಕಡೇ ಓವರ್ನ ಕಡೇ ಬಾಲ್ನಲ್ಲಿ ಸಿಕ್ಸರ್ ಹೊಡೆಯುವ ರೀತಿ ಐತಿಹಾಸಿಕ ಕ್ರಮ ಕೈಗೊಂಡರು. ಒಳ ಮೀಸಲಾತಿ ಕೂಗು ಎರಡೂವರೆ ದಶಕಗಳ ಬೇಡಿಕೆಯಾಗಿತ್ತು ಅದನ್ನು ಈಡೇರಿಸುವ ಕೆಲಸ ಮಾಡಿದ್ದಾರೆ. ಇದನ್ನು ಜನರ ಮುಂದಿಡುತ್ತೇವೆ ಎಂದರು.
ಇದಲ್ಲದೆ ಕರ್ನಾಟಕವನ್ನು ಕಾಂಗ್ರೆಸಿಗರು ಹೇಗೆ ಎಟಿಎಂ ಮಾಡಿಕೊಂಡಿದ್ದರು. ಅರ್ಕಾವತಿ ಹಗರಣದಲ್ಲಿ ೮೦೦೦ ಕೋಟಿ ರೂ. ಸರ್ಕಾರಕ್ಕೆ ನಷ್ಟವಾಗಿದೆ ಎಂದು ಕಾಂಗೆಸ್ ಸರ್ಕಾರವೇ ನೇಮಿಸಿದ್ದ ಕೆಂಪಣ್ಣ ಆಯೋಗ ವರದಿ ಕೊಟ್ಟಿದೆ. ಈ ನಷ್ಟಕ್ಕೆ ಹೊಣೆಯಾರು? ಹೀಗೆ ಹಾಸಿಗೆ, ದಿಂಬಿನಲ್ಲಿ, ಮರಳಿನಲ್ಲಿ, ಸಣ್ಣ ನೀರಾವರಿ, ಭಾರೀ ನೀರಾವರಿ ಇಲಾಕೆ ಹಗರಣಗಳಲ್ಲಿ ಹೇಗೆ ಭ್ರಷ್ಟಾಚಾರ ನಡೆಸಿದರು, ಎಂಎಲ್ಸಿ ಗೋವಿಂದ ರಾಜು ಡೈರಿಕತೆ ಏನು? ಕರ್ನಾಟಕಕ್ಕೆ ಹೇಗೆ ಮೋಸ ಮಾಡಿದರು ಎನ್ನುವುದನ್ನು ಜನರಿಗೆ ತಿಳಿಸುತ್ತೇವೆ ಎಂದರು.
ಇದರ ಜೊತೆಗೆ ಕಾಂಗ್ರೆಸಿಗರು ಎಸ್ಡಿಪಿಐ, ಪಿಎಫ್ಐ ಜೊತೆ ಮಾಡಿಕೊಂಡಿದ್ದ ಮೈತ್ರಿಯಿಂದಾಗಿ ದೇಶದ ಕಾನೂನು ಮತ್ತು ಸಮಗ್ರತೆಗೆ ಹೇಗೆ ಹಾನಿಯುಂಟು ಮಾಡಿದೆ. ಕಾಂಗ್ರೆಸ್ ಮತ್ತು ಕೋಮುವಾದಿ ಸಂಘಟನೆಗಳ ನಡುವಿನ ನಂಟು ರಾಷ್ಟ್ರೀಯ ಹಿತಾಸಕ್ತಿಗೂ ವಿರುದ್ಧವಾದದ್ದು ಎಂಬುದನ್ನು ಜನರಿಗೆ ತಿಳಿಸುವವರಿದ್ದೇವೆ ಎಂದರು.
ನಾವು ಜನರ ಮುಂದೆ ಡಬ್ಬಲ್ ಇಂಜಿನ್ ಸರ್ಕಾರದ ಲಾಭ ಕರ್ನಾಟಕದ ಜನತೆಗೆ ಹೇಗೆ ಆಗಿದೆ ಎನ್ನುವುದನ್ನ ಸ್ಪಷ್ಟ ಅಂಕಿ ಅಂಶಗಳ ಸಮೇತ ಇಡುತ್ತೇವೆ. ಮೈಸೂರು-ಬೆಂಗಳೂರು ರಾಷ್ಟೀಯ ಹೆದ್ದಾರಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ೫೩೦೦ ಕೋಟಿ ರೂ. ಸಹಯೋಗ, ಹಲವಾರು ಹೆದ್ದಾರಿ, ರೈಲು ಯೋಜನೆಗಳು, ಮಹದಾಯಿ ಯೋಜನೆಗೆ ಅಂಗೀಕಾರ ದೊರಕಿಸಿದ್ದು ಇದೆಲ್ಲವೂ ಡಬ್ಬಲ್ ಇಂಜಿನ್ ಸರ್ಕಾರದ ಸಮನ್ವದಿಂದ ಸಾಧ್ಯವಾಗಿರುವುದು ಜನರಿಗೂ ಗೊತ್ತಿದೆ ಎಂದರು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮುಖಂಡರುಗಳಾದ ಈಶ್ವರಳ್ಳಿ ಮಹೇಶ್, ಕೆ.ಪಿ.ವೆಂಕಟೇಶ್, ಬೀಕನಹಳ್ಳಿ ಸೋಮಶೇಖರ್, ವರಸಿದ್ದಿ ವೇಣುಗೋಪಾಲ್, ಟಿ.ರಾಜಶೇಖರ್, ಕವಿತಾ ಶೇಖರ್ ಇದ್ದರು.
Congress corruption election in front of people