ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪವಿತ್ರ ಹಬ್ಬ. ಪ್ರತಿಯೊಬ್ಬ ಮತದಾರನೂ ತಪ್ಪದೇ ಮತಚಲಾಯಿಸಬೇಕು ಎಂದು ಮಂಗಳೂರು ಪಶ್ಚಿಮ ವಲಯದ ಐಜಿಪಿ ಡಾ.ಚಂದ್ರಗುಪ್ತ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ವಕೀಲರ ಸಂಘ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಮತ್ತು ಸರ್ಕಾರಿ ನೌಕರರ ಸಂಘ ಸಹಿತ ವಿವಿಧ ಇಲಾಖೆಗಳ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಾಂಗ, ನ್ಯಾಯಾಂಗ ಸೇರಿ ಶಾಸಕಾಂಗದ ಆಯ್ಕೆ ಕುರಿತು ಮತದಾನ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಸಂವಿಧಾನವು 18 ವರ್ಷ ದಾಟಿದವರಿಗೆ ಮತದಾನದ ಹಕ್ಕು ನೀಡಿದೆ. ಚುನಾವಣೆಯ ಈ ಹಬ್ಬದಲ್ಲಿ ಅರ್ಹ ಮತದಾರರೆಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.
ಮತದಾರ ಚುನಾವಣೆಯಲ್ಲಿ ಮತದಾನಕ್ಕೂ ತಮಗೂ ಸಂಬಂಧವಿ ಲ್ಲದಂತೆ ಇರುವುದು ಭವಿಷ್ಯಕ್ಕೆ ತಂದುಕೊಳ್ಳುವ ಕುತ್ತು. ಆದ್ದರಿಂದ ಮೇ 10 ರಂದು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಚುನಾವಣೆಯಲ್ಲಿ ಹಕ್ಕು ಚಲಾಯಿಸುವುದು ಹೆಮ್ಮೆ ಮತ್ತು ಗೌರವದ ಸಂಕೇತ. ಆದರೆ ಗ್ರಾಮೀಣ ಭಾಗಕ್ಕೆ ಹೋಲಿಕೆ ಮಾಡಿದಲ್ಲಿ ನಗರಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿಯಿಂದ ಜಿಲ್ಲೆಯಾದ್ಯಂತ ಮತದಾನದ ಜಾಗೃತಿ ಕೈಗೊಳ್ಳಲಾಗಿದೆ ಎಂದರು.
ಮತದಾರ ಆಸೆ, ಆಮಿಷ, ಒತ್ತಡಕ್ಕೆ ಸಿಲುಕಬಾರದು. ಯಾರೊ ಬ್ಬರೂ ಮತದಾನದಿಂದ ವಂಚಿತರಾಗದೆ ನಿರ್ಭೀತಿಯಿಂದ ಮತಚಲಾಯಿಸಬೇಕು. ಸುತ್ತಲಿನವರಿಗೂ ಮತದಾನದ ಮಹತ್ವ ತಿಳಿಸಿ ಹಕ್ಕು ಚಲಾವಣೆಗೆ ಪ್ರೆರೇಪಿಸಬೇಕು ಎಂದು ಹೇಳಿದರು.
ಜಿಲ್ಲಾಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿ. ಪ್ರಭು ಮಾತನಾಡಿ, ಮೇ 10 ರಂದು ಮತದಾನದ ಹಬ್ಬ ನಡೆಯಲಿದೆ. ಪ್ರತಿಯೊಬ್ಬ ಮತದಾರರು ತಮ್ಮ ಮತಗಟ್ಟೆ ಕೇಂದ್ರಗಳಿಗೆ ಮತ ಚಲಾಯಿಸಬೇಕು. ಈ ಹಬ್ಬವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಮತದಾನ ಜಾಗೃತಿ ಅಭಿಯಾನ ತಾಲ್ಲೂಕು ಕಚೇರಿ ಆವರಣದಿಂದ ಹೊರಟು ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೂ ಕಲಾತಂಡದೊಂದಿಗೆ ಸಾಗಿತು. ಮೆರವಣಿಗೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನಗರಸಭೆ, ಅರಣ್ಯ ಇಲಾಖೆ, ಅರೆಸೇನಾಪಡೆ, ಪೊಲೀಸ್, ಆರೋಗ್ಯ ಇಲಾಖೆ, ಸಹಿತ ವಿವಿಧ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಕೈಯಲ್ಲಿ ಫಲಕ ಹಿಡಿದು ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮತದಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಹಸ್ತಾಕ್ಷರ ಸಂಗ್ರಹಿಸಲಾಯಿತು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಂ. ಸುಧಾಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ಓಂಕಾರಸ್ವಾಮಿ, ಸೋಮಶೇಖರ್ ಇದ್ದರು.
In a democratic system election is a sacred festival