ತರೀಕೆರೆ ಕಳೆದ 15 ವರ್ಷಗಳಿಂದ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಡವರ ನೊಂದವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಎಲ್ಲ ವರ್ಗದವರಿಗೂ ಸೇವೆ ಸಲ್ಲಿಸುತ್ತಾ ಬಂದಿದ್ದೆ. ಆ ಕಾರಣಕ್ಕಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಕಡೆ ಗಳಿಗೆಯಲ್ಲಿ ಟಿಕೆಟ್ ನೀಡದ ಕಾರಣ ನಾನು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವವರಿಗೆ ಸಲ್ಲಿಸಿದ್ದೇನೆ ಎಂದು ಸಮಾಜ ಸೇವಕ ಹಾಗೂ ಪಕ್ಷೇತರ ಅಭ್ಯರ್ಥಿ ಎಚ್ ಎಂ ಗೋಪಿಕೃಷ್ಣ ತಿಳಿಸಿದರು.
ಅವರು ಇಂದು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ ನಂತರ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ 2013ರಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಜೆಡಿಎಸ್ ಪಕ್ಷದ ವರಿಷ್ಠರು ಟಿಕೆಟ್ ನೀಡುತ್ತೇನೆಂದು ಪಕ್ಷಕ್ಕೆ ಕರೆಸಿಕೊಂಡು ಟಿಕೆಟ್ ನೀಡುವ ಭರವಸೆ ನೀಡಿ ನಂತರ ಟಿಕೆಟ್ ನೀಡದೆ ಮೋಸ ಮಾಡಿದ್ದರು. ನಂತರ 2018ರಲ್ಲಿ ಬಿಜೆಪಿ ಪಕ್ಷದ ವರಿಷ್ಠರು ಸಹ ಟಿಕೆಟ್ ನೀಡುವುದಾಗಿ ನಂಬಿಸಿ ಪಕ್ಷದಲ್ಲಿ ದುಡಿಸಿಕೊಂಡು ಮೋಸ ಮಾಡಿದರು.
ಅವರಿಬ್ಬರಿಗೂ ಹೊರತಾಗಿಲ್ಲ ಎಂಬಂತೆ ಕಾಂಗ್ರೆಸ್ ಪಕ್ಷದ ವರಿಷ್ಠರು ಸಹ ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ಟಿಕೆಟ್ ನೀಡುವ ಆಸೆ ಹುಟ್ಟಿಸಿದರು. ಆ ನಂಬಿಕೆಯಿಂದಲೇ ನಾನು ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತ ಬಂದಿದ್ದೆ. ಆದರೆ ಪ್ರಾಮಾಣಿಕತೆಗೆ ಬೆಲೆ ಕೊಡದ ಕಾಂಗ್ರೆಸ್ ಪಕ್ಷದ ವರಿಷ್ಟರು ನನಗೆ ಟಿಕೆಟ್ ಕೊಡದೆ ದ್ರೋಹವೆಸಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬೆಳವಣಿಗೆಯನ್ನು ಮನಗಂಡ ನಮ್ಮ ಕ್ಷೇತ್ರದ ಮಾಜಿ ಶಾಸಕರುಗಳಾದ ಎಸ್ಎಮ್ ನಾಗರಾಜ್, ಟಿ. ಹೆಚ್. ಶಿವ ಶಂಕರಪ್ಪ, ಮುಖಂಡರಗಳಾದ ಎಮ್ ಕೃಷ್ಣಮೂರ್ತಿ, ಬೈಟು ರಮೇಶ್, ಟಿ ಜಿ ಶಶಾಂಕ್, ಪದ್ಮರಾಜ್, ಹಾಲವಜ್ರಪ್ಪ, ಟಿ ಎಲ್ ಪ್ರಕಾಶ್, ಕೆ ಆರ್ ಧ್ರುವ ಕುಮಾರ್, ಕೆ ಪಿ ಕುಮಾರ್, ಟಿ ಎಂ ಭೋಜರಾಜ್ ಹಾಗೂ ಎಲ್ಲ ಸಮಾಜದ ಮುಖಂಡರುಗಳು ನನ್ನ ಸಮಾಜ ಸೇವೆಯನ್ನು ಗುರುತಿಸಿ ಮೂರು ಪಕ್ಷಗಳು ನನಗೆ ಟಿಕೆಟ್ ನೀಡಲು ನಿರಾಕರಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಿಸಲೇಬೇಕೆಂಬ ಪಣತೊಟ್ಟು ಬಂಡಾಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ನಾನೊಬ್ಬ ಸಣ್ಣ ಸಮುದಾಯದವನಾಗಿದ್ದರೂ ಸಹ ಬಹುದೊಡ್ಡ ಸಮುದಾಯದ ನಾಯಕರುಗಳು ನನ್ನನ್ನು ಬೆಂಬಲಿಸುವ ಮೂಲಕ ಬೇರೆ ಯಾವುದೇ ರಾಜಕೀಯ ಪಕ್ಷದವರು ಸಣ್ಣ ಸಮುದಾಯದವರನ್ನು ಕಡೆಗಣಿಸಬಾರದು ಎಂಬ ಸಂದೇಶ ಮತ್ತು ಎಚ್ಚರಿಕೆ ಗಂಟೆಯನ್ನು ನೀಡಿದ್ದಾರೆ. ಈ ಎಲ್ಲಾ ನಾಯಕರುಗಳ ಮತ್ತು ಕಾರ್ಯಕರ್ತರುಗಳ ಬೆಂಬಲ ಹಾಗೂ ಸಹಕಾರಕ್ಕೆ ನಾನು ಅಭಿನಂದಿಸುತ್ತೇನೆ. ಈ ಕ್ಷೇತ್ರದ ಮತದಾರ ಬಂಧುಗಳು ನನ್ನನ್ನು ಈ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಅಧಿಕ ಮತಗಳಿಂದ ಜಯಗಳಿಸುವಂತೆ ಸಹಕಾರ ನೀಡಬೇಕಾಗಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಗೋಪಿಕೃಷ್ಣ ರವರ ಪತ್ನಿ ಶ್ರೀಮತಿ ಅನುಸೂಯ ಗೋಪಿಕೃಷ್ಣ ಇದ್ದರು.
HM Gopikrishna has submitted nomination papers as a non-party candidate