ಅಜ್ಜಂಪುರ: ‘ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸ ಮತ್ತು ಕ್ಷೇತ್ರದ ಜನರೊಂದಿಗಿನ ಬಾಂಧವ್ಯ, ನನ್ನ ಗೆಲುವಿಗೆ ಸಹಕಾರಿಯಾಗಲಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕನಾಗಿದ್ದಾಗ ‘ಅಜ್ಜಂಪುರವನ್ನು ತಾಲ್ಲೂಕು ಕೇಂದ್ರವಾಗಿ ಮಾಡಿದ್ದೇನೆ. ಹೆದ್ದಾರಿ, ಮುಖ್ಯ ಮತ್ತು ಸಂಪರ್ಕ ರಸ್ತೆ ಅಭಿವೃದ್ಧಿಗೊಳಿಸಿದ್ದೇನೆ. ಅಜ್ಜಂಪುರಕ್ಕೆ ನೂರು ಹಾಸಿಗೆ ಆಸ್ಪತ್ರೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ತಾಲ್ಲೂಕು ಕಚೇರಿ, ಕೋರ್ಟ್ ಕಟ್ಟಡ ನಿರ್ಮಿಸುವ ಕನಸಿದೆ. ಇವುಗಳ ಸಾಕಾರಕ್ಕೆ ಮತ್ತೊಮ್ಮೆ ಆಶೀರ್ವದಿಸಿ’ ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯತ ಸಮಾನ ಮನಸ್ಕರರ ಮುಖಂಡ ಬೆಟ್ಟದಹಳ್ಳಿ ರವಿ ಮಾತನಾಡಿ, ‘ಶಾಸಕರಾಗಿದ್ದ ವೇಳೆ ಜಿ.ಎಚ್. ಶ್ರೀನಿವಾಸ್, ವೀರಶೈವ ಲಿಂಗಾಯತರಿಗೆ ಅನ್ಯಾಯ ಮಾಡಿಲ್ಲ. ವೀರಶೈವರಿರುವ ಗ್ರಾಮಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಎಸಗಿಲ್ಲ. ಅವರಿಗೆ ವೀರಶೈವ ಸಮಾಜ ಬೆಂಬಲ ನೀಡಲಿದೆ’ ಎಂದು ಭರವಸೆ ನೀಡಿದರು.
‘ಅಭ್ಯರ್ಥಿ ಜಿ.ಎಚ್.ಶ್ರೀನಿವಾಸ್ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅವರ ಗೆಲುವು ನಿಶ್ಚಿತ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ರವಿ ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಕುಶ್ ಆನಂದ್ ಕುಮಾರ್, ರವಿ ಶ್ಯಾನುಬಾಗ್, ಬಂಗನಗಟ್ಟೆ ರಾಜಣ್ಣ, ಹಿರೇಖಾನವಂಗಲ ಕುಮಾರ್, ಅಣ್ಣಾಪುರ ರವಿ, ಧರ್ಮರಾಜ್, ಜಿ.ನಟರಾಜ್, ಜಿ.ಜಿ. ತಿಪ್ಪೇಶ್ ಇದ್ದರು.
Relationship with people helps to win