ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಶನಿವಾರ ರಂಜಾನ್ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆದರೆ, ಚಿಕ್ಕಮಗಳೂರಿನ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ವೇಳೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ತಮ್ಮಯ್ಯ ವಿರುದ್ಧ ಮುಸ್ಲಿಂ ಯುವಕರ ಗುಂಪೊಂದು ಅಸಮಧಾನ ವ್ಯಕ್ತಪಡಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ನಗರದ ವಿಜಯಪುರ ಸೇರಿದಂತೆ ಕೆಇಬಿ ಬಳಿ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಇಬಿ ಬಳಿ ಇರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ವೇಳೆಯಲ್ಲಿ ಮುಸ್ಲಿಂ ಗುರುಗಳು ಹಾಗೂ ಗಣ್ಯರು ಶುಭಾಷಯ ಕೋರುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ವಾಡಿಕೆ.
ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ತಮ್ಮಯ್ಯ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಹಾಗೂ ಇತರೆ ಮುಖಂಡರೊಂದಿಗೆ ಈದ್ಗಾ ಮೈದಾನಕ್ಕೆ ತೆರಳಿದ್ದು, ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಕೆಲವು ಯುವಕರು ಆಕ್ಷೇಪ ವ್ಯಕ್ತಪಡಿಸಿ, ಇದೇ ಈದ್ಗಾ ಮೈದಾನದಲ್ಲಿ ಹಂದಿಯನ್ನು ಕೊಂದು ಹಾಕಿರುವ ಆರ್ಎಸ್ಎಸ್ಗೆ ಸೇರಿದ ವ್ಯಕ್ತಿ ಇಲ್ಲಿಗೆ ಕಾಲು ಇಡಬಾರದು. ಅವರು ಇಲ್ಲಿಂದ ಹೊರಗೆ ಹೋಗಬೇಕೆಂದು ತಕರಾರು ಎತ್ತಿ ಏರು ಧ್ವನಿಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇಲ್ಲಿಯೇ ಪ್ರಾರ್ಥನೆಗಾಗಿ ಸೇರಿದ್ದ ಮುಸ್ಲಿಂನ ಇತರೆ ಯುವಕರು, ಎಚ್.ಡಿ. ತಮ್ಮಯ್ಯ ವಿರುದ್ಧ ಆರೋಪ ಮಾಡಿರುವ ಯುವಕರನ್ನು ತರಾಟೆ ತೆಗೆದುಕೊಂಡರು, ಆಗ ಸ್ಥಳದಲ್ಲಿ ಎರಡು ಗುಂಪಿನವರು ಪರಸ್ಪರ ಏರು ಧ್ವನಿಯಲ್ಲಿ ಮಾತನಾಡಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.
ಈ ಎಲ್ಲಾ ಗೊಂದಲದ ನಡುವೆ ಮುಸ್ಲಿಂನ ಕೆಲವು ಯುವಕರು ಎಚ್.ಡಿ. ತಮ್ಮಯ್ಯ ಅವರನ್ನು ಸ್ಥಳದಿಂದ ಎತ್ತಿಕೊಂಡು ಹೆಗಲ ಮೇಲೆ ಕೂರಿಸಿ ಜೈಕಾರ ಹಾಕುತ್ತಾ ಮೆರವಣಿಗೆಯಲ್ಲಿ ಕರೆದುಕೊಂಡು ಹೊರಗೆ ನಡೆದರು. ಎರಡು ಗುಂಪಿನವರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಮುಸ್ಲಿಂ ಸಮುದಾಯದ ಮುಖಂಡರು ಕೂಡ ಸ್ಥಳದಲ್ಲಿಯೇ ಇದ್ದರಿಂದ ಅವರು ಸಹ ಮಧ್ಯಪ್ರವೇಶಿಸಿದ ನಂತರ ಪರಿಸ್ಥಿತಿ ತಿಳಿಯಾಯ್ತು.
Outrage against Congress candidate Tammayya