ಎನ್.ಆರ್.ಪುರ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ಪಾದಯಾತ್ರೆ ಮೂಲಕ ಮತಯಾಚಿಸಿದರು
ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ನಿಷ್ಕ್ರಿಯವಾಗಿದ್ದು ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಮುಂಚೂಣಿಗೆ ಬರದೆ, ಧರ್ಮದ ಹೆಸರಿನಲ್ಲಿ ಚುನಾವಣೆ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಶೃಂಗೇರಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ಹೇಳಿದರು.
ಪಟ್ಟಣದಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕ್ಷೇತ್ರದಲ್ಲಿ ೨೦ವರ್ಷಗಳಿಂದ ಕಾಂಗ್ರೆಸ್, ಆರ್ಎಸ್ಎಸ್ ಭಯ ತೋರಿಸಿ ಅಲ್ಪಸಂಖ್ಯಾತರ ಮತಗಳನ್ನು ಕ್ರೋಡೀಕರಿಸಿದೆ. ಬಡ ಅಲ್ಪಸಂಖ್ಯಾತರನ್ನು ನಿರ್ಲಕ್ಷ್ಯ ಮಾಡುತ್ತ ಸರ್ಕಾರದ ಸೌಲಭ್ಯಗಳನ್ನು ಶ್ರೀಮಂತ ಅಲ್ಪಸಂಖ್ಯಾತರಿಗೆ ಒದಗಿಸಿದೆ. ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತ ಹಿಂದೂಗಳ ಮತವನ್ನು ಇಡಿಗಂಟಾಗಿಸಿ ಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೆ ಕ್ಷೇತ್ರದಲ್ಲಿ ಶಾಂತಿ, ಸಹಬಾಳ್ವೆ ಬೇಕಾಗಿಲ್ಲ ಎಂದು ಆರೋಪಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾಲೇಜುಗಳಲ್ಲಿ ಉದ್ಯೋಗ ಮೇಳ ಆಯೋಜಿಸಿ ಯುವಜನಾಂಗಕ್ಕೆ ಉದ್ಯೋಗವಕಾಶ ಕಲ್ಪಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಸ್ಥಾಪಿಸಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಕೆ.ಎನ್.ಶಿವದಾಸ್, ಮರುಳಪ್ಪ, ಪ್ರಭಾಕರ್, ಸಿಜ್ಜು, ದೀಪಾ ಉಮಾಶಂಕರ್, ಪಿಕಪ್ ಚಂದ್ರು, ಈ.ಸಿ.ಕ್ಸೇವಿಯಾರ್, ಎಂ.ಮಹೇಶ್ ಇದ್ದರು.
ಪಟ್ಟಣದ ಬಸ್ತಿಮಠದಿಂದ ಪ್ರವಾಸಿ ಮಂದಿರದವರೆಗೆ ಪಾದಯಾತ್ರೆ ಮೂಲಕ ಮತಯಾಚಿಸಲಾಯಿತು. ತಾಲ್ಲೂಕಿನ ರಾವೂರು ಮೀನು ಕ್ಯಾಂಪ್ನಲ್ಲೂ ಮತಯಾಚಿಸಲಾಯಿತು.
Sudhakar Shetty poll