ಅಜ್ಜಂಪುರ: ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅವರಿಗೆ ಸೇರಿದ ತಾಲ್ಲೂಕಿನ ಗಡೀಹಳ್ಳಿ ಗ್ರಾಮದ ತೋಟದ ಮನೆಗೆ ಶನಿವಾರ ತಡರಾತ್ರಿ ನುಗ್ಗಿದ ದರೋಡೆಕೋರರು ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ.
‘ಭಾನುವಾರ ಸಂಬಂಧಿಕರ ಮದುವೆ ಇತ್ತು. ಮದುವೆಗೆ ಬಂದ ಬಂಧುಗಳು ಮನೆಯಲ್ಲಿಯೇ ತಂಗಿದ್ದರು. ರಾತ್ರಿ ಒಂದು ಗಂಟೆ ವೇಳೆ, 10 ರಿಂದ 15 ಜನರು ಏಕಾಏಕಿ ಮನೆ ಬಾಗಿಲು ಮುರಿದು, ಒಳನುಗ್ಗಿದರು. ಮಚ್ಚು, ಲಾಂಗು, ಪಿಸ್ತೂಲ್ ತೋರಿಸಿ, ಬೆದರಿಸಿದರು.₹60 ಸಾವಿರ ನಗದು, ಸಂಬಂಧಿಕ ಮಹಿಳೆಯರು ಧರಿಸಿದ್ದ 963 ಗ್ರಾಂ ಆಭರಣ ಕಸಿದುಕೊಂಡರು.
ಈಗ ಚುನಾವಣೆ ಇದೆ, ಹಣ ಎಲ್ಲಿಟ್ಟಿದ್ದೀರಿ? ಎಂದು ಗದರಿಸಿದರು. ಹಣ ಇಲ್ಲ ಎಂದು ಹೇಳಿದ ನನ್ನ ಮೇಲೆ ಹಲ್ಲೆ ನಡೆಸಿದರು. ಮನೆ ಮಹಡಿಯಲ್ಲಿ ಮಗ-ಸೊಸೆ ಎಚ್ಚರಗೊಂಡು, ಹತ್ತಿರದ ಸಂಬಂಧಿಕರಿಗೆ ಕರೆ ಮಾಡಿ, ವಿಷಯ ತಿಳಿಸಿದರು. ಹೆಚ್ಚಿನ ಜನ ಮನೆ ಹತ್ತಿರ ಬರೋದನ್ನು ಗಮನಿಸಿ, ಕಳ್ಳರು ಒಡಿದರು. ಎಲ್ಲರೂ ಮಾಸ್ಕ್, ಮಂಕಿ ಕ್ಯಾಪ್ ಧರಿಸಿದ್ದರು. ಕನ್ನಡ ಮಾತನಾಡುತ್ತಿದ್ದರು’ ಎಂದು ಘಟನೆ ಬಗ್ಗೆ ಮಾಜಿ ಶಾಸಕ ಎಸ್.ಎಂ. ನಾಗರಾಜ್ ವಿವರಿಸಿದರು.
ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಪ್ರಕರಣಕ್ಕೆ ಸಂಭಂದಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದೇವೆ. ಉಳಿದವರನ್ನು ಬಂಧಿಸಲು ನಾಲ್ಕು ತಂಡ ರಚಿಸಲಾಗಿದೆ ಎಂದು ಪಿಎಸ್ಐ ಗಿರೀಶ್ ಹೇಳಿದರು. ‘ಘಟನೆಯನ್ನು ಖಂಡಿಸುತ್ತೇವೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು’ ಎಂದು ಬಿಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗೋಪಿಕೃಷ್ಣ ಒತ್ತಾಯಿಸಿದರು.
Former MLA S.M. Robbery at Nagaraj farm house