ಚಿಕ್ಕಮಗಳೂರು: ಶಿಕ್ಷಣ ಮತ್ತು ಸಂಸ್ಕಾರ ಸಮಾಜಮುಖಿ ಬದುಕಿಗೆ ಪ್ರೇರಕ ಎಂದು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ೧೦೦೮ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದರು.
ಬಾಳೆಹೊನ್ನೂರಿನ ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ’ಸಮಾಜಮುಖಿ ಪತ್ರಕರ್ತ ಚಿ.ಸ.ಪ್ರಭುಲಿಂಗಶಾಸ್ತ್ರಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಸುಮಾರು ನಾಲ್ಕು ದಶಕಗಳ ಪತ್ರಿಕಾ ವೃತ್ತಿಯ ಜೊತೆಗೆ ಧರ್ಮ, ಪರಿಸರ, ಶಿಕ್ಷಣ, ಸಾಹಿತ್ಯ, ಸಮಾಜಸೇವೆ, ಸಂಘಟನೆ ಸೇರಿದಂತೆ ಹತ್ತಾರು ಸಂಗತಿಗಳ ಬಗ್ಗೆ ಆಸಕ್ತಿವಹಿಸಿ ಪರಿಶ್ರಮಿಸಿದ ವ್ಯಕ್ತಿ ನಡೆದುಬಂದ ಹಾದಿಯನ್ನು ದಾಖಲಿಸುವ ಈ ಪುಸ್ತಕ ಮಾದರಿಯಾಗಿದೆ ಎಂದರು.
ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರ. ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ. ಸಂಸ್ಕಾರ ಕೆಡಲು ಬಿಡುವುದಿಲ್ಲ. ದಾನದಿಂದ ಮನೆ, ಧ್ಯಾನದಿಂದ ಮನಸ್ಸು, ಪ್ರೀತಿಯಿಂದ ಹೃದಯ, ನಂಬಿಕೆಯಿಂದ ಸಂಬಂಧಗಳು ಸಂಪದ್ಭರಿತ. ನೋವುಗಳ ನಡುವೆ ನೆಮ್ಮದಿ ಹುಡುಕುವುದೇ ಬದುಕು. ನಿರಾಸೆಗಳ ನಡುವೆ ಭರವಸೆಯೊಂದಿಗೆ ಸಾಗುವುದೇ ಜೀವನ ಎಂದರು.
ಹಸಿವಾದಾಗ ಸಿಗದ ಅನ್ನ, ದಣಿದಾಗ ಸಿಗದ ನೆರಳು, ಕಷ್ಟದಲ್ಲಿ ಇದ್ದಾಗ ಬಾರದ ಸ್ನೇಹ ಯಾವತ್ತೂ ವ್ಯರ್ಥ. ಹಸಿವು ನೀಗಿಸುವ ಭತ್ತಕ್ಕೆ ಕುಡುಗೋಲಿನ ಏಟು ತಪ್ಪಿದ್ದಲ್ಲ. ನಿಯತ್ತಿನಿಂದ ಬದುಕುವವರ ಮೇಲೆ ನಿಂದನೆಗಳು ಹೆಚ್ಚು. ಜವಾಬ್ದಾರಿಯಿಂದ ಬದುಕುವವರಿಗೆ ನೋವು ಹೆಚ್ಚು ಎಂಬುದು ಇಲ್ಲಿ ವ್ಯಕ್ತವಾಗಿದೆ. ಸಮಾಜಮುಖಿ ಬದುಕಿನಿಂದ ಅಪಾರ ಪ್ರೀತಿವಿಶ್ವಾಸ ಗಳಿಸಿರುವುದು ಪ್ರತಿ ಪುಟಗಳಲ್ಲೂ ಎದ್ದುಕಾಣುತ್ತಿದೆ ಎಂದ ರಂಭಾಪುರಿ ಜಗದ್ಗುರುಗಳು, ೬೦ನೆಯ ವರ್ಷಕ್ಕೆ ಪಾದಾರ್ಪಣೆ ಜೊತೆಗೆ ವಿವಾಹ ರಜತಮಹೋತ್ಸವ ಶ್ರೀಪೀಠದಲ್ಲಿ ಆಚರಿಸಿಕೊಳ್ಳುತ್ತಿರುವುದು ಅನುಕರಣೀಯ ಎಂದರು.
ಪುಸ್ತಕ ಪರಿಚಯಿಸಿದ ಸಾಹಿತಿ ಎಚ್.ಎಂ.ನಾಗರಾಜರಾವ್ಕಲ್ಕಟ್ಟೆ ಮೂರು ತಲೆಮಾರಿನ ಚಿಕ್ಕಮಗಳೂರು ಪತ್ರಿಕೋದ್ಯಮದ ಹೆಜ್ಜೆ ಗುರುತುಗಳನ್ನು ದಾಖಲಿಸುವ ಕಾರ್ಯ ಕೃತಿಯಲ್ಲಾಗಿದೆ. ಪತ್ರಿಕೋದ್ಯಮವನ್ನು ಪ್ರೀತಿ-ಶ್ರದ್ಧೆ-ನಿಷ್ಠೆಯಿಂದ ನಡೆಸಿಕೊಂಡು ಬಂದ ಪ್ರಭುಲಿಂಗಶಾಸ್ತ್ರಿ ವೃತ್ತಿಧರ್ಮವನ್ನು ಪರಿಪಾಲಿಸಿಕೊಂಡು ಬಂದಿದ್ದಾರೆ. ನ್ಯಾಯಬದ್ಧವಾಗಿ ಆಶಯಗಳಿಗೆ ಅನುಗುಣವಾಗಿ ಸುದ್ದಿ ಬರೆಯುವ ಮೂಲಕ ಮಾಧ್ಯಮ ರಂಗದ ನಂಬಿಕೆ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆಂದರು.
ಸಾಹಿತಿ-ವಚನಕಾರ ಚಟ್ನಳ್ಳಿಮಹೇಶ್ ಮಾತನಾಡಿ ನಾಲ್ಕು ದಶಕಗಳ ನಡೆದುಬಂದ ಹಾದಿ ಪುಸ್ತಕ ದಾಖಲಿಸಿದೆ. ಮಾಧ್ಯಮಕ್ಕೆ ಉದ್ಯಮದ ಸ್ಪರ್ಶ ನೀಡದೆ ಸೇವೆ ಎಂದೇ ಪರಿಗಣಿಸಿ ಪಾವಿತ್ರ್ಯತೆ ಕಾಪಾಡುವ ಮೂಲಕ ಪತ್ರಿಕಾರಂಗದ ಘನತೆ ಹೆಚ್ಚಿಸುವಲ್ಲಿ ಪ್ರಭುಲಿಂಗಶಾಸ್ತ್ರಿ ಅವರ ಕೊಡುಗೆ ಅಮೋಘ. ಸಾರ್ವಜನಿಕ ಬದುಕು ಮಾದರಿ ಎಂದರ.
ಮಾಧ್ಯಮಕ್ಕೂ ಸಾಂಸ್ಕೃತಿಕ ನಂಟು ಕಟ್ಟಿ, ಪತ್ರಿಕಾ ವಲಯದ ಶುಚಿ ಮತ್ತು ಶುಭ್ರತೆಗೆ ಸದಾ ಮಿಡಿಯುವ ನಡೆಧೀರ. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಮೂಲಕ ಬಹುಮುಖಿ ಚಿಂತನೆಗಳ ಪ್ರಭಾವದಿಂದ ಹೊರಹೊಮ್ಮಿದ ಸಾರ್ಥಕ ಕಾರ್ಯಗಳು ನಾಡಿನ ಪರಂಪರೆ ಉಳಿಸಿ, ತಿಳಿಸಿ, ಬೆಳೆಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದೆ ಎಂದು ಮಹೇಶ್ ಬಣ್ಣಿಸಿದರು.
ಹಿರಿಯಪತ್ರಕರ್ತ ಸ.ಗಿರಿಜಾಶಂಕರ್ ಮಾತನಾಡಿ ಸದಾ ಕ್ರಿಯಾಶೀಲನಾದ ಪ್ರಭು ಜಿಲ್ಲೆಯ ಪ್ರತಿ ಮೂಲೆಯಲ್ಲೂ ಜನಗಳಿಗಷ್ಟೇ ಪರಿಚಿತನಾಗದೆ ಆ ಪರಿಸರದ ಪೂರ್ಣ ಪರಿಚಯವನ್ನು ಹೊಂದಿ ಜಿಲ್ಲೆಯ ರಾಜಕೀಯ ಕ್ಷೇತ್ರದ ಒಳಹೆಣಿಗೆಗಳನ್ನೂ ಬಲ್ಲವನು. ಜನಮಿತ್ರದ ಮೂಲಕ ಪತ್ರಕಾರಂಗ ಪ್ರವೇಶಿಸಿ ಆಸಕ್ತಿ ಶ್ರದ್ಧೆಯಿಂದ ಹಂತ ಹಂತವಾಗಿ ಮೇಲೇರಿ ಮಾಧ್ಯಮ ಅಕಾಡೆಮಿ ಪುರಸ್ಕಾರಕ್ಕೆ ಭಜನನಾಗಿರುವುದು ಹೆಮ್ಮೆ.
ಪತ್ರಿಕಾವೃತ್ತಿಯ ನೈತಿಕತೆಗೆ ಕುಂದುಂಟಾಗದಂತೆ ಬರೆಯುವ ಮನಸ್ಥಿತಿಯನ್ನು ರೂಢಿಸಿಕೊಂಡವನು. ಸಮಾಜಮುಖಿಯಾದರೂ ಪತ್ರಿಕಾಕ್ಷೇತ್ರದ ನಂಟನ್ನು ಎಂದೂ ಸಡಿಲಗೊಳಿಸಿಕೊಳ್ಳಲಿಲ್ಲ. ವರದಿಗಾರಿಕೆಯಲ್ಲಿ ತನ್ನ ತಾತ್ವಿಕ ಬದ್ಧತೆ ಗೋಚರಿಸದಂತೆ ರುಚಿಶುದ್ಧತೆಯನ್ನು ಕಾಪಾಡಿಕೊಂಡ ಆತ್ಮೀಯಶಿಷ್ಯ ಎಂದು ಗಿರಿಜಾಶಂಕರ್ ನುಡಿದರು.
ಕ.ಸಾ.ಪ.ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ ಮಾತನಾಡಿ ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಅಪಾರ. ವಾಸ್ತವವಾಗಿ ಅವರು ಜಿಲ್ಲೆಯ ಉತ್ತಮ ಸಾಂಸ್ಕೃತಿಕ ಹಾಗೂ ಮಾಧ್ಯಮ ರಾಯಭಾರಿ ಎಂಬುದು ಇಂದು ಬಿಡುಗಡೆಯಾಗುತ್ತಿರುವ ಪುಸ್ತಕ ಸಮರ್ಥಿಸಿದೆ ಎಂದರು.
ಮಾ.ಸಂ.ಪ್ರತಿಷ್ಠಾನದ ಗೌರವಾಧ್ಯಕ್ಷ ಎ.ಬಿ.ಸುದರ್ಶನ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಕೌಟುಂಬಿಕ ಸಂಬಂಧದಿಂದ ಬೆಸೆದ ನಮ್ಮ ನಂಟು ಸಾರ್ವಜನಿಕ ಜೀವನದಲ್ಲೂ ಗಟ್ಟಿಯಾಗಿದೆ. ಪತ್ರಿಕಾರಂಗದಲ್ಲಿ ಛಾಪು ಮೂಡಿಸಿರುವ ಪ್ರಭು, ರಾಜ್ಯಾದ್ಯಂತ ಉತ್ತಮ ಸಾಹಿತಿ-ಕಲಾವಿದ-ರಾಜಕೀಯ ಮುಖಂಡರು-ಅಧಿಕಾರಿಗಳ ಸ್ನೇಹ ಸಂಪರ್ಕವನ್ನು ಸಾಧಿಸಿದ್ದರೂ ಸ್ವಾರ್ಥಕ್ಕಾಗಿ ಕಿಂಚಿತ್ತೂ ಬಳಕೆ ಮಾಡದ ಸ್ವಾಭಿಮಾನಿ ಎಂಬುದು ಅಭಿಮಾನದ ಸಂಗತಿ ಎಂದರು.
ಶಂಕರದೇವರಮಠದ ಶ್ರೀಚಂದ್ರಶೇಖರ ಶಿವಾಚಾರ್ಯಸ್ವಾಮೀಜಿ ಮಾತನಾಡಿ ತಂದೆಯವರಿಂದ ಧಾರ್ಮಿಕ ಸಂಸ್ಕಾರಗಳನ್ನು ಕಲಿತು ಮಾಧ್ಯಮರಂಗ ಪ್ರವೇಶಿಸಿ ಬದುಕು ಕಟ್ಟಿಕೊಂಡಿರುವ ಪ್ರಭು, ಸಮಾಜಮುಖಿ ಚಿಂತನೆಗಳಿಂದ ಬಹುಜನರ ಪ್ರೀತಿಗೆ ಪಾತ್ರನಾಗಿದ್ದಾನೆಂದರು.
ಮಾ.ಸಂ.ಪ್ರ. ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ೪೦ವರ್ಷಗಳ ಪತ್ರಿಕೋದ್ಯಮ-ಸುತ್ತಮುತ್ತಲಿನ ಆಗುಹೋಗುಗಳ ಅನುಭವಗಳನ್ನು ದಾಖಲಿಸುವ ಸಣ್ಣ ಪ್ರಯತ್ನ ಈ ಕೃತಿ. ಜೊತೆ ಜೊತೆಯಾಗಿ ವಿವಿಧ ರಂಗಗಳಲ್ಲಿ ಕೈಜೋಡಿಸಿ, ಮಾರ್ಗದರ್ಶನ ಮಾಡಿ ಮುನ್ನಡೆಸಿದ ಸಾಧಕರ ನೆನೆಕೆಯಿಂದ ಪುಸ್ತಕಕ್ಕೊಂದು ನೆಲೆ-ಬೆಲೆ ದೊರೆತಂತಾಗಿದೆ ಎಂದರು.
ಶ್ರೀದೇವಿ ಗುರುಕುಲದ ಸಂಸ್ಥಾಪಕ ಡಾ.ದಯಾನಂದಮೂರ್ತಿಶಾಸ್ತ್ರಿ ಮಾತನಾಡಿ ಪತ್ರಕರ್ತರಾಗಿದ್ದರೂ ಧಾರ್ಮಿಕ ಸಂಸ್ಕಾರ ಹೊಂದಿದ್ದು ಶ್ರೀ ದೇವಿ ಗುರುಕುಲದ ಮುನ್ನಡೆಗೆ ಸಹಕಾರಿಗಳಾದವರು. ಪಂಚಾಚಾರ್ಯರೂ ಸೇರಿದಂತೆ ನೂರಾರು ಧಾರ್ಮಿಕ ಮುಖಂಡರ ಒಡನಾಟ ಹೊಂದಿ ಧಾರ್ಮಿಕ ಕಾರ್ಯಕ್ರಮಗಳಿಗೂ ಸೂಕ್ತ ಪ್ರಚಾರ ಸಿಗುವಂತೆ ಪ್ರಯತ್ನಿಸಿದವರೆಂದರು.
ಭೇರಗಂಡಿ ಬೃಹನ್ಮಠಾಧ್ಯಕ್ಷ ಶ್ರೀರೇಣುಕಮಹಾಂತ ಶಿವಾಚಾರ್ಯರು ಮತ್ತು ಗದಗಿನ ಶ್ರೀಪಂಚಾಕ್ಷರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶ್ರೀ ದೇವಿಗುರುಕುದ ಸುಧಾಚಂದ್ರಮೌಳಿ ತಂಡ ವೇದಘೋಷ ಮಾಡಿದ್ದು, ಶ್ರೀಪಾರ್ವತಿ ಮಹಿಳಾ ಮಂಡಳಿಯ ಸಪ್ನಾ-ಸೌಭಾಗ್ಯ ತಂಡ ಪ್ರಾರ್ಥಿಸಿತು. ಮೈಸೂರಿನ ರೇಣುಕಾಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದ್ದು, ಮಾ.ಸಂ.ಪ್ರ.ಕಾರ್ಯದರ್ಶಿ ಸುಮಿತ್ರಾಶಾಸ್ತ್ರಿ ವಂದಿಸಿದರು.
ರಾಮಕೃಷ್ಣ ಕಾಲೇಜು ಆಡಳಿತಾಧಿಕಾರಿ ಉಮಾಮಹೇಶ್ವರಯ್ಯ, ಶಿವಮೊಗ್ಗದ ಪ್ರೊ.ಸೋಮಶೇಖರಯ್ಯ, ಯೋಗಸಾಧಕ ಸಿ.ವಿ.ರುದ್ರಾರಾಧ್ಯ, ಡಿಐಸಿ ವಿಶ್ರಾಂತ ಜಂಟಿನಿರ್ದೇಶಕ ಜಂಗಮಬಳಗದ ಬಿ.ಪಿ.ಶಿವಮೂರ್ತಿ, ಪಂಚಾಚಾರ್ಯಸೇವಾ ಸಮಿತಿಅಧ್ಯಕ್ಷ ವೀರಭದ್ರಯ್ಯ, ವಿಶ್ರಾಂತ ಕೃಷಿಅಧಿಕಾರಿ ಜಲದಿಹಳ್ಳಿಶೇಖರಯ್ಯ, ಬ್ಯಾಂಕ್ ಅಧಿಕಾರಿ ಗುರುಕಾಂತಾರಾಧ್ಯ, ನಿವೃತ್ತಸೇನಾನಿ ಬೆಂಗಳೂರಿನ ಕೊಟ್ರೇಶಯ್ಯ ಸೇರಿದಂತೆ ೨೫ಸಾಧಕ ಹಿರಿಯದಂಪತಿಗಳಿಗೆ ಜಂಗಮರತ್ನ ಪ್ರಶಸ್ತಿನೀಡಿ ಗೌರವಿಸಲಾಯಿತು.
ಸಮಾಜಮುಖಿ ಬದುಕಿಗೆ ಪ್ರೇರಕರಾದ ಹಿರಿಯಪತ್ರಕರ್ತ ಜಿ.ವಿ.ಚೂಡನಾಥ ಅಯ್ಯರ್, ಬಂಟರಸಂಘದ ಅಧ್ಯಕ್ಷ ಜೀವನಶೆಟ್ಟಿ, ರೇಣುಕಾಚಾರ್ಯ ಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜು, ಯಗಟಿಪುರಪ್ರಸನ್ನ, ಪರಿಸರವಾದಿ ಗಜೇಂದ್ರಗೊರಸುಕೊಡುಗೆ, ಲೆಕ್ಕಪರಿಶೋಧಕ ಬೆಂಗಳೂರಿನ ಎಲ್.ಎನ್.ದೇಶಪಾಂಡೆ, ನ್ಯಾಮತಿ ಅರ್ಬನ್ಬ್ಯಾಂಕ್ ಅಧ್ಯಕ್ಷ ವೀರೇಶ್, ಹೊನ್ನಾಳಿಯ ವೀರೇಶಶಾಸ್ತ್ರಿ, ಕೃಷಿಪರಿಕರಗಳ ಸಮಾಲೋಚಕ ದಾವಣಗೆರೆಯ ಶಿವಾನಂದಯ್ಯ, ವಕೀಲ ಬಿ.ಆರ್.ಜಗದೀಶ್ ಮತ್ತಿತರ ೨೫ದಂಪತಿಗಳನ್ನು ಸಮಾಜಸೇವಾ ರತ್ನ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಕೆಯುಡಬ್ಲೂಜೆ ಜಿಲ್ಲಾಧ್ಯಕ್ಷ ಟಿ.ಎನ್.ಎ.ಮೊದಲಿಯಾರ್ ಕಾರ್ಯದರ್ಶಿ ಎಂ.ಬಿ.ಅಶೋಕಕುಮಾರ್, ಚಿಕ್ಕಮಗಳೂರು ಜಿಲ್ಲಾಪತ್ರಕರ್ತರ ಸಂಘದಅಧ್ಯಕ್ಷ ಜಿ.ಎಂ.ರಾಜಶೇಖರ್, ಉಪನ್ಯಾಸಕ ರುದ್ರಪ್ಪಶಾಸ್ತ್ರಿ, ಯೂಟ್ಯೂಬ್ ವರದಿಗಾರ ಬಾಳೆಹೊನ್ನೂರಿನ ನಾಗರಾಜಭಟ್, ಜಿಲ್ಲಾ ಗಮಕಸಾಹಿತ್ಯ ಪರಿಷತ್ಅಧ್ಯಕ್ಷ ರಾಮಸುಬ್ರಾಯಶೇಟ್, ಜಂಗಮಬಳಗದ ಪ್ರಸನ್ನ, ಅಕ್ಕನಬಳಗದ ಕಾರ್ಯದರ್ಶಿ ಆಶಾಹೇಮಂತ್, ಆಲ್ದೂರು ರೇಣುಕಾರ್ಯ, ಹಿರೇಮಗಳೂರು ಪುಟ್ಟಸ್ವಾಮಿ, ಟಿಪಿಎಸ್ ಮಾಜಿಅಧ್ಯಕ್ಷ ಹಿರೇಕೊಳಲೆ ಶಿವಕುಮಾರ್, ಕರ್ನಾಟಕ ಮಹಿಳಾಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ, ಹರಿಹರಪುರ ಗುರುಕುಲದ ಕಾರ್ಯದರ್ಶಿ ಉಮೇಶರಾವ್ ಮತ್ತಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪ್ರಭುಲಿಂಗಶಾಸ್ತ್ರಿ ಮತ್ತು ಸುಮಿತ್ರಾಶಾಸ್ತ್ರಿ ಅವರನ್ನು ಅಭಿನಂದಿಸಿದರು. ಶ್ರೀಪೀಠದ ದೈವಗಳಿಗೆ ವಿಶೇಷಪೂಜೆ ನಂತರ ಶಿವಪಾರ್ವತಿಯರ ವಿವಾಹ ಗಿರಿಜಾ ಕಲ್ಯಾಣ ವೇ.ಬ್ರ.ಡಾ.ದಯಾನಂದಮೂರ್ತಿಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯಿತು.
Book Lokarpana from Sri Rambhapuri Jagadgu