ಕೊಪ್ಪ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷ ಸಹಕಾರ ನೀಡಲಿದೆ. ನಾನು ಯುವ ಜನತೆಗೆ ನೀಡಿದ್ದ ಅನೇಕ ಭರವಸೆ ಯನ್ನು ಸ್ಥಳೀಯ ಶಾಸಕರ ನೆರವಿನಿಂದ ಪೂರೈಸಲು ಶ್ರಮಿಸುತ್ತೇನೆ’ ಎಂದು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಸುಧಾಕರ ಎಸ್.ಶೆಟ್ಟಿ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಚುನಾವಣೆಯಲ್ಲಿ ಕ್ಷೇತ್ರದ 19,476 ಮಂದಿ ಮತ ನೀಡಿದ್ದಾರೆ. ಅದಕ್ಕಾಗಿ 256 ಬೂತ್ನ ಮತದಾರರಿಗೂ ಧನ್ಯವಾದ ತಿಳಿಸುತ್ತಿದ್ದೇನೆ. ಪ್ರಸ್ತುತ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಟಿ.ಡಿ.ರಾಜೇಗೌಡ ಅವರನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.
‘ಚುನಾವಣೆ ಮುಗಿದಿರಬಹುದು ಆದರೆ, ಜನರ ಸಮಸ್ಯೆ ಮುಗಿದಿಲ್ಲ. ಕೇವಲ 16 ತಿಂಗಳ ಹಿಂದೆ ಅಮ್ಮ ಫೌಂಡೇಷನ್ ಮೂಲಕ ಸಮಾಜದ ಕೆಳವರ್ಗದ ಜನರ ಸೇವೆ ಮಾಡಿದ್ದೇನೆ. ನಿರುದ್ಯೋಗ ಸಮಸ್ಯೆ ಇದೆ. ಕೇಂದ್ರ ಸರ್ಕಾರದ ಹಲವು ಯೋಜನೆ ತಳಮಟ್ಟದ ಜನರಿಗೆ ತಲುಪಿಲ್ಲ, ಅವುಗಳನ್ನು ತಲುಪಿಸುವ ನಿಟ್ಟಿನಲ್ಲಿ ಜನರ ನಡುವೆ ಇರುತ್ತೇನೆ’ ಎಂದರು.
‘ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದಾಗ ನನ್ನ ಬಗ್ಗೆ ಎಲ್ಲಿಯೂ ಹಗುರವಾಗಿ ಟೀಕೆ ಮಾಡಿಲ್ಲ, ಅವರ ಬಗ್ಗೆ ಗೌರವವಿದೆ. ಧರ್ಮಗಳ ಮಧ್ಯೆ ದ್ವೇಷ ಇರಬಾರದು ಎಂಬ ಕನಸು ಹೊತ್ತಿದ್ದೇನೆ. ಮುಂದೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ’ ಎಂದರು.
JDS party cooperation for the development of Sringeri Assembly Constituency