ಅಜ್ಜಂಪುರ: ಶಾಸಕನಾಗಿ ಆಯ್ಕೆಯಾದ ಬಳಿಕ ಪಟ್ಟಣಕ್ಕೆ ಬಂದ ಜಿ.ಎಚ್.ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್, ‘ಶಾಸಕನಾಗಿ ಆಯ್ಕೆಯಾಗಲು ಸಹಕಾರ ನೀಡಿದ ಮತದಾರರಿಗೆ ಕೃತಜ್ಞತೆಗಳು. ಅಜ್ಜಂಪುರ ಪಟ್ಟಣಕ್ಕೆ ಭದ್ರೆ ಕುಡಿಯುವ ನೀರು ಪೂರೈಸುವ ಮತ್ತು ತಾಲ್ಲೂಕು ಕಚೇರಿಯಲ್ಲಿ ಬಾಕಿ ಉಳಿದಿರುವ ಕಚೇರಿ ಆರಂಭಿಸಲು ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.
ಪಕ್ಷ ನೀಡಿರುವ ‘ಐದು ಗ್ಯಾರೆಂಟಿ’ ಗಳನ್ನು ಸರ್ಕಾರ ಜಾರಿಗೊಳಿಸಿದ ತಕ್ಷಣ, ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತೇನೆ. ಕ್ಷೇತ್ರದಲ್ಲಿ ಜನಪರ ಮತ್ತು ಅಭಿವೃದ್ಧಿಪರ ಆಡಳಿತ ನೀಡುವುದಾಗಿ ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಜಿ.ಎಚ್.ಶ್ರೀನಿವಾಸ್ ಅವರನ್ನು ಅಭಿನಂದಿಸಿ ಮಾತನಾಡಿದ ಪಟ್ಟಣದ ಜಾಮೀಯಾ ಮಸೀದಿ ಅಧ್ಯಕ್ಷ ಮಸೂದ್ ಅಹಮದ್, ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿರುವುದು ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿರುವುದು ಸಂತಸ ತಂದಿದೆ. ಇದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ್ ಕುಮಾರ್, ಮುಖಂಡ ಜಿ.ನಟರಾಜ್, ಬ್ಲಾಕ್ ಕಾಂಗ್ರೆಸ್ ಒಬಿಸಿ ಅಧ್ಯಕ್ಷ ತಿಪ್ಪೇಶ್ ಮಡಿವಾಳ್, ಪಂಚಾಯಿತಿ ಅಧ್ಯಕ್ಷ ಮುಸ್ತಾಕ್ ಅಹಮದ್, ನವೀನ್ ಮಂದಾಲಿ, ಷಡಾಕ್ಷರಿ, ಜೋಗಿ ಪ್ರಕಾಶ್, ರಿಯಾಜ್ ಅಹಮದ್, ಪ್ರದೀಪ್ ಕುಮಾರ್, ಅಣ್ಣಪ್ಪ ಇದ್ದರು.
Thanks to the voters who helped to get elected as an MLA