ಕಡೂರು: ‘ಮಡಿವಂತಿಕೆಯನ್ನು ಬಿಟ್ಟು ನುಡಿವಂತಿಕೆಯನ್ನು ಎತ್ತಿಹಿಡಿದದ್ದು ದಾಸ ಸಾಹಿತ್ಯ’ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆಣೇಗೆರೆ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ಚಿಕ್ಕಮಗಳೂರು ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಸಾಹಿತ್ಯ ಸಂರಕ್ಷಣೆಯಾಗಿ ರುವುದು ಪೂರ್ವಜರಿಂದ. ಇದನ್ನು ಉದ್ಧರಿಸಿದವರಲ್ಲಿ ಮೊದಲಿಗರು ಜನಪದರು. ವಚನ ಮತ್ತು ದಾಸ ಸಾಹಿತ್ಯವು ಜಾತಿ ಭೇದವಿಲ್ಲದೆ ಧರ್ಮವನ್ನೇ ದಿವ್ಯಮಂತ್ರವನ್ನಾಗಿಸಿ ಕೊಂಡು ಜೀವನಾನುಭವವನ್ನೇ ತಮ್ಮ ರಚನೆಗಳಲ್ಲಿ ಹಿಡಿದಿಟ್ಟು, ಸಾವಿರಾರು ರಚನೆಗಳನ್ನು ನಮಗಾಗಿ ನೀಡಿರುವ ದಾಸ ಸಾಹಿತ್ಯ ನಮ್ಮ ಕನ್ನಡದ ಹೆಮ್ಮೆಯ ಆಸ್ತಿಯಾಗಿದೆ. ಈ ದಾಸರ ರಚನೆಗಳು ಮನೆಮನೆಯಲ್ಲೂ ಅನುರಣಿಸಬೇಕಿದೆ. ಆ ನಿಟ್ಟಿನಲ್ಲಿ ದಾಸಸಾಹಿತ್ಯ ಸಮ್ಮೇಳನ ಒಂದು ಹಿರಿಯ ಕಲ್ಪನೆ’ ಎಂದರು.
‘ಭಾಷೆಯ ಬಳಕೆ ಹೇಗಿರಬೇಕೆಂ ಬುದಕ್ಕೆ ದಾಸಸಾಹಿತ್ಯ ಉತ್ತಮ ಉದಾಹರಣೆ. ಆಡುಭಾಷೆಯಲ್ಲಿ ಇರುವ ಪದಗಳನ್ನೇ ಬಳಸಿ ಹೃದಯಕ್ಕೆ ಹತ್ತಿರವಾದವರು ದಾಸಸಾಹಿತಿಗಳು. ಭಾಷೆ ಬಳಸಿದರೆ ಉಳಿಯುತ್ತದೆಯೆಂಬ ಸತ್ಯವನ್ನು ಅಂದೇ ಅರಿತು ಕನ್ನಡ ಭಾಷೆಯನ್ನುಳಿಸಿದ ಮತ್ತು ಜಾತ್ಯತೀತ ಸಾಹಿತ್ಯ ಸೃಷ್ಟಿಸಿದ ಕೀರ್ತಿ ದಾಸಸಾಹಿತಿಗಳಿಗೆ ಸೇರುತ್ತದೆ. ಆ ನಿಟ್ಟಿನಲ್ಲಿ ದಾಸವರೇಣ್ಯರ ಸ್ಮರಣೆ ನಮ್ಮ ಕರ್ತವ್ಯ’ ಎಂದರು.
ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ‘ಕನ್ನಡ ಕಾವ್ಯ ಲೋಕಕ್ಕೆ ದಾಸವರೇಣ್ಯರು ನೀಡಿದ ಕೊಡುಗೆಯನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಾಹಿತ್ಯ ಕ್ಷೇತ್ರದ ಎಲ್ಲ ಬಗೆಯ ಪ್ರಕಾರಗಳನ್ನು ಗುರುತಿಸುವ ಕಾರ್ಯವನ್ನು ಪರಿಷತ್ ಮಾಡುತ್ತದೆ’ ಎಂದರು.
ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾಸ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಗಾಯಕ ಹಿರೇನಲ್ಲೂರು ಶ್ರೀನಿವಾಸ್ ಅವರಿಗೆ ಪ್ರದಾನ ಮಾಡಲಾಯಿತು. ಸಾಹಿತಿ ಕ.ವೆಂ.ಚಂದ್ರಮೌಳಿ, ಅ.ರಾ.ಸತೀಶ್ಚಂದ್ರ, ಕಸಾಪ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಸತ್ಯನಾರಾಯಣ, ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಹೋಬಳಿ ಅಧ್ಯಕ್ಷ ರವಿಚಂದ್ರ, ಡಿಎಸ್ಎಸ್ ಮೈಸೂರು ವಿಭಾಗೀಯ ಸಂಚಾಲಕ ಶೂದ್ರ ಶ್ರೀನಿವಾಸ್, ಸಾವಿತ್ರಿ ಗಂಗಪ್ಪ, ಲತಾ ರಾಜಶೇಖರ್, ಲೋಕೇಶ್, ಜಿ.ರಂಗನಾಥ ಸ್ವಾಮಿ ಇದ್ದರು.
ರೂಪಾನಾಯ್ಕ ನಿರೂಪಿಸಿದರು. ಸಮ್ಮೇಳನಾಧ್ಯಕ್ಷರನ್ನು ಆಲಂಕೃತ ರಥದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಕರೆತರಲಾಯಿತು.
It was Dasa Sahitya that left Madivantike and upheld Nidivantike