ಚಿಕ್ಕಮಗಳೂರು: ದೇಶದ ಭೀಕರ ರೈಲು ದುರಂತದಲ್ಲಿ ಒಂದಾಗಿರುವ ಒಡಿಶಾ ರೈಲು ದುರಂತದ ಪ್ರಾಣಾಪಾಯದಿಂದ ಪಾರಾಗಿದ್ದ ಚಿಕ್ಕಮಗಳೂರಿನ ವ್ಯಕ್ತಿ, ಒಡಿಶಾ ಪ್ರವಾಸ ಮುಗಿಸಿ ವಾಪಸ್ ಬರುವಾಗ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಿಂದ ಸುಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ ನೂರಹತ್ತು ಜನ ಒಡಿಶಾದ ಬಬಲೇಶ್ವರದಲ್ಲಿ ನಡೆದ ರೈಲು ಅಪಘಾತದಲ್ಲಿ ಅಪಾಯದಿಂದ ಪಾರಾಗಿದ್ದರು. ಅಪಘಾತದಲ್ಲಿ 110 ಜನರಿಗೂ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಅಪಘಾತದ ಬಳಿಕ ಯಾತ್ರೆಗೆ ತೆರಳಿದ್ದರು. ಕಳಸದಿಂದ ತೆರಳಿದ್ದ ಎಲ್ಲರೂ ಅದೇ ರೈಲಿನಲ್ಲಿ ಇದ್ದರು. ಅಪಘಾತಕ್ಕೂ 2 ಗಂಟೆ ಮುನ್ನ ರೈಲಿನ ಬೋಗಿ ಬದಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಸುಮೇದ್ ಶಿಖರ್ಜಿ ಯಾತ್ರೆಗೆ ಹೋಗಿ ಹಿಂದಿರುಗುವಾಗ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಜೈನ ಯಾತ್ರಿಕರು ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಮುಂಭಾಗ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಸ್ವಗ್ರಾಮ ಕಳಕೋಡು ತಲುಪಲು ಎರಡು ದಿನ ಬೇಕಾಗುತ್ತದೆ. ಒಡಿಶಾ ರೈಲು ಅಪಘಾತದಲ್ಲಿ 270ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 1000ಕ್ಕೂ ಮಂದಿ ಗಾಯಗೊಂಡಿದ್ದರು. ಆದರೆ, ಚಿಕ್ಕಮಗಳೂರು ಜಿಲ್ಲೆಯಿಂದ ತೆರಳಿದ್ದ 110 ಜನರಿಗೂ ಯಾವುದೇ ತೊಂದರೆ ಆಗಿರಲಿಲ್ಲ. ಈಗ ಯಾತ್ರೆಯಿಂದ ವಾಪಸ್ ಬರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
He died of a heart attack while returning from a trip to Odisha