ಕಳಸ: ಕಳಸ ತಾಲ್ಲೂಕಿನ ಜನರ ವಿವಿಧ ಸಮಸ್ಯೆಗಳ ಅರಿವಿದ್ದು ಆದ್ಯತೆಯ ಮೇರೆಗೆ ಅವುಗಳನ್ನು ಈಡೇರಿಸುವ ಸರ್ವ ಪ್ರಯತ್ನ ಮಾಡುತ್ತೇನೆ ಎಂದು ನೂತನ ಶಾಸಕ ನಯನಾ ಮೋಟಮ್ಮ ತಿಳಿಸಿದರು
ಅವರು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಮಾಂಗಲ್ಯಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಹೊರನಾಡಿನ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಸಮಾರಂಭ ಮಾತನಾಡಿದರು
ವಿಧಾನಪರಿಷತ್ತಿನ ಉಪಸಭಾಪತಿ ಎಂ.ಕೆ.ಪ್ರಾಣೇಶ್ ವಿವಿಧ ಶಾಲೆಗಳಿಗೆ ಊಟದ ತಟ್ಟೆ-ಲೋಟ ಮತ್ತು ತೆಂಗಿನ ಸಸಿ ವಿತರಿಸಿ ಮಾತನಾಡಿ ಕಳಸ ತಾಲ್ಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳ ಅರಿವಿದ್ದು ಪರಿಹಾರ ಮಾಡುವ ಪ್ರಯತ್ನದಲ್ಲಿ ಸದಾ ನಾನು ತಾಲ್ಲೂಕಿನ ಜನರ ಜೊತೆ ಇರುತ್ತೇನೆ ಎಂದರು.
ಹೊರನಾಡು ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಷಿ ಮಾತನಾಡಿ ಶ್ರೀ ಕ್ಷೇತ್ರದ ವತಿಯಿಂದ ಪ್ರತಿ ವರ್ಷವೂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದಡಿ “ಅನ್ನ ದಾಸೋಹ ಯೋಜನೆ” ಯಡಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಭೋಜನ ವ್ಯವಸ್ಥೆಗಾಗಿ ಊಟದ ತಟ್ಟೆ ಹಾಗೂ ಲೋಟ ಮತ್ತು ’ಶೈಕ್ಷಣಿಕ ಅಭಿವೃದ್ಧಿ ಯೋಜನೆ” ಯಡಿ ಕಳಸ ತಾಲ್ಲೂಕು ಶಾಲಾ ವಿದ್ಯಾರ್ಥಿಗಳ ಬರವಣಿಗೆಗಾಗಿ ನೂಟ್ ಪುಸ್ತಕಗಳ ವಿತರಣೆ ಮಾಡಲಾಗುತ್ತಿದೆ ಎಂದರು.
ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ವಿತರಣೆ,”ಕೃಷಿ ಸಮೃದ್ದಿ ಯೋಜನೆ” ಯಡಿ ತೆಂಗಿನ ಸಸಿಗಳ ವಿತರಣೆ ಮತ್ತು ’ಮಹಿಳಾ ಅಭಿವೃದ್ಧಿ ಯೋಜನೆ” ಯಲ್ಲಿ ಬಟ್ಟೆ ಹೊಲಿಯುವ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಹಮ್ಮಿಕೊಂಡಿದ್ದು ಈ ವರ್ಷವೂ ಇಂದು ಅನುಷ್ಠಾನ ಮಾಡಲಾಗುತ್ತಿದ್ದು ಶ್ರೀ ಕ್ಷೇತ್ರ ಸಮಾಜಮುಖಿಯಾಗಿ ಚಿಂತನೆ-ಯೋಜನೆ ಮಾಡಿ ಸೇವೆ ಸಲ್ಲಿಸುತ್ತಿದೆ ಎಂದರು.
ಕಳಸ ತಾಲ್ಲೂಕು ಕುಂದು ಕೊರತೆಗಳ ಬಗ್ಗೆ ಗಮನ ಸೆಳೆದರು. ಕಳಸ- ಕೊಟ್ಟಿಗೆಹಾರ,ಕಳಸ-ಕುದುರೆಮುಖ,ಕಳಸ-ಬಾಳೆಹೊನ್ನೂರು ರಸ್ತೆಗಳು ಜೀರ್ಣಾವಸ್ಥೆಯಲ್ಲಿದ್ದು ಅವುಗಳ ದುರಸ್ತಿ ಹಾಗೂ ಕಳಸ-ಕೊಟ್ಟಿಹಾರ ರಸ್ತೆ ಕಿರಿದಾಗಿರುವುದರಿಂದ ರಸ್ತೆ ಅಗಲೀಕರಣ ಮಾಡಲು ಮತ್ತು ಇನಾಂ ಭೂಮಿಯಲ್ಲಿರುವ ರೈತರ ಸಮಸ್ಯೆ ಬಗೆ ಹರಿಸಲು ಆದ್ಯತೆ ಹಾಗೂ ಸಂಸೆ-ಎಳನೀರು ಮೂಲಕ ರಸ್ತೆ ನಿರ್ಮಿಸಿ ಮಂಗಳೂರು ತಲುಪಲು ಸುಲಭವಾಗಿ ಚಾರ್ಮಾಡಿ ಘಾಟಿನ ಸಂಚಾರ ಒತ್ತಡ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು
ನೂತನ ಕಳಸ ತಾಲ್ಲೂಕಿಗೆ ಅಗತ್ಯವಾದ ಕಟ್ಟಡಗಳು, ಸಿಬ್ಬಂದಿ ಮೊದಲಾದ ಮೂಲಸೌಲಭ್ಯಗಳನ್ನು ಒದಗಿಸಲು ತುರ್ತಾಗಿ ಕ್ರಮವಹಿಸಿ ಕಳಸ ತಾಲ್ಲೂಕು ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಈ ವೇದಿಕೆಯಲ್ಲಿ ಬಿ.ರಾಜಲಕ್ಷ್ಮಿ ಜೋಷಿ, ಕಳಸ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಹೊರನಾಡು ಗ್ರಾಮಪಂಚಾಯಿತಿ ಅಧ್ಯಕ್ಷ ವೃಷಭರಾಜ್ ಇದ್ದರು. ಸಮಾರಂಭದಲ್ಲಿ ಕರ್ನಾಟಕದಾದ್ಯಂತ ನೂರಾ ಮೂರು ಶಾಲೆಗಳಿಗೆ ಊಟದ ತಟ್ಟೆ ಮತ್ತು ಲೋಟ ವಿತರಣೆ, ಕಳಸ ತಾಲ್ಲೂಕು ವಿದ್ಯಾರ್ಥಿಗಳಿಗೆ ನೂಟ್ ಪುಸ್ತಕ, ಕೃಷಿಕರಿಗೆ ಇನ್ನೂರು ತೆಂಗಿನ ಸಸಿ ಹಾಗೂ ಆಸಕ್ತ ಹತ್ತು ಮಹಿಳೆಯರಿಗೆ ಹೊಲಿಗೆಯಂತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಳಸ ಗ್ರಾ.ಪಂ.ಅಧ್ಯಕ್ಷೆ ಸುಜಯಾ ಸದಾನಂದ್ ಹಾಗೂ ಸಾಮಾಜಿಕ ಧುರೀಣರಾದ ಬಿ.ಜ್ವಾಲನಯ್ಯ ಹಾಗೂ ಕರ್ನಾಟಕದ ಮತ್ತು ಕಳಸ ತಾಲ್ಲೂಕು ವಿವಿಧ ಶಾಲೆಗಳ ಉಪಧ್ಯಾಯರು ಉಪಸ್ಥಿತರಿದ್ದರು.
All efforts are being made to solve the problems of Kalasa Taluk