ಮೂಡಿಗೆರೆ: ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕನಗದ್ದೆ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ
ಆದರೆ ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆ ಮೃತಪಟ್ಟಿದ್ದು, ಈ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿದು ಸಾಗಿಸಲು ಸರ್ಕಾರದ ಆದೇಶದ ಮೇರೆಗೆ ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಶನಿವಾರ ರಾತ್ರಿ ಮೇಕನಗದ್ದೆ ಗ್ರಾಮದ ಸಮೀಪ ಕಾಡಾನೆ ಕಾಣಿಸಿಕೊಂಡಿದ್ದು, ಅರವಳಿಗೆ ಚುಚ್ಚುಮದ್ದು ಹಾಕಲಾಗಿತ್ತು.
ಅರವಳಿಕೆ ಚುಚ್ಚುಮದ್ದು ಹಾಕಿದ ನಂತರ ಆನೆಯ ಜಾಡು ಹಿಡಿದು ಹೋದಾಗ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿಯೇ ಕಾಡಾನೆ ಮೃತಪಟ್ಟು ಬಿದ್ದಿದ್ದು ಕಂಡುಬಂದಿದೆ. ಶನಿವಾರ ರಾತ್ರಿ ಸುಮಾರು ೧೧-೩೦ ರ ವೇಳೆಗೆ ಈ ಘಟನೆ ನಡೆದಿದೆ. ಇತ್ತೀಚೆಗೆ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ತಿಕ್ ಗೌಡ ಅವರನ್ನು ಕಾಡಾನೆಯೊಂದು ತುಳಿದು ಸಾಯಿಸಿದ್ದ ದೊಡ್ಡಗೊಳ್ಳ ಎಂಬ ಸ್ಥಳದಿಂದ ಸುಮಾರು ೫೦ ಮೀಟರ್ ದೂರದಲ್ಲಿ ಕಾಡಾನೆ ಸತ್ತು ಬಿದ್ದಿದೆ ಎಂದು ತಿಳಿದುಬಂದಿದೆ.
ಸಾವನ್ನಪ್ಪಿರುವ ಆನೆ ಒಂಟಿಗೊಂಬಿನ ಆನೆಯಾಗಿದೆ. ಇದು ಅನೇಕ ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿತ್ತು ಎಂದು ತಿಳಿಬಂದಿದೆ. ಮೇಲ್ನೋಟಕ್ಕೆ ಆನೆ ಆಯಾತಪ್ಪಿ ಬಿದ್ದು ಮೇಲೇಳಲಾಗದೇ ಸಾವನ್ನಪ್ಪಿರುವಂತೆ ಕಂಡುಬಂದಿದೆ. ಆದರೆ ಆನೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Kadane died during the operation