ಚಿಕ್ಕಮಗಳೂರು: ಭೂಹೀನ ದಲಿತರಿಗೆ ಭೂಮಿ, ನಿವೇಶನ ರಹಿತರಿಗೆ ನಿವೇಶನ ಹಾಗೂ ವಸತಿ ನೀಡುವಂತೆ ಆಗ್ರಹಿಸಿ ಸಿಪಿಐ ವಿವಿಧ ವಲಯಗಳಲ್ಲಿ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ತಾಲೂಕು ಸಮಿತಿ ಕಾರ್ಯದರ್ಶಿ ಕೆರಮಕ್ಕಿ ರಮೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಈ ಎಲ್ಲಾ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಪಕ್ಷದ ಎಲ್ಲಾ ಶಾಖೆಗಳು ತಕ್ಷಣ ಸಭೆ ನಡೆಸಿ ಹೋರಾಟಕ್ಕೆ ಸಜ್ಜಾಗಬೇಕೆಂದು ಕರೆ ನೀಡಲಾಗಿದೆ ಎಂದು ಹೇಳಿದರು.
ಆಲ್ದೂರು ವಲಯ ಸಮಿತಿಯಿಂದ ಆಗಸ್ಟ್ ೨೪ ರಂದು ಆಲ್ದೂರು ನಾಡಕಚೇರಿ ಮುಂದೆ ಪ್ರತಿಭಟನೆ ಹಾಗು ಸಮಾವೇಶ ನಡೆಸಬೇಕು. ಆಗಸ್ಟ್ ೧೯ ರಂದು ಶಿರವಾಸೆ ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸಲು ಸಿಪಿಐ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಆವುತಿ ವಲಯ ಸಮಿತಿಯಿಂದ ಆಗಸ್ಟ್ ೨೬ ರಂದು ಬ್ಯಾರವಳ್ಳಿ ಗ್ರಾ.ಪಂ ಮುಂದೆ ಹಾಗೂ ಆಗಸ್ಟ್ ೩೦ ರಂದು ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ನಗರ ಸಮಿತಿಯಿಂದ ಆಗಸ್ಟ್ ೨೮ ರಂದು ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ೪೮ ಗ್ರಾಮ ಪಂಚಾಯಿತಿಗಳಲ್ಲಿ ಪ್ರತೀ ಪಂಚಾಯಿತಿಗೆ ೪ ಎಕರೆ ಜಮೀನು ಮೀಸಲಿಟ್ಟು ನಿವೇಶನ ನೀಡಲು ಜಿಲ್ಲಾಡಳಿತ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಈಡೇರಿಸದಿದ್ದರೆ ಸೆಪ್ಟೆಂಬರ್ ೧೫ ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ತಾಲೂಕು ಸಮಿತಿಯ ಸಹ ಕಾರ್ಯದರ್ಶಿ ಹೆಡದಾಳ್ ಕುಮಾರ್, ನಗರ ಸಹ ಕಾರ್ಯದರ್ಶಿ ಹೆಚ್.ಕೆ ಸೋಮೇಗೌಡ ಉಪಸ್ಥಿತರಿದ್ದರು.
Protest demanding to give land-housing to the landless