ಚಿಕ್ಕಮಗಳೂರು: ನೊಳಂಬ ಸ್ವಯಂಸೇವಕ ಸಂಘದಿಂದ (ಎನ್ಎಸ್ಎಸ್) ಆ.೪ ರಂದು ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಂಘದ ತಾಲೂಕು, ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಸೇರಿದಂತೆ ನೊಳಂಬ ಜಾತ್ರೆ ಏರ್ಪಡಿಸಲಾಗಿದೆ ಎಂದು ನೊಳಂಬ ಲಿಂಗಾಯತ ಸಮಾಜದ ಮುಖಂಡ ಬಿ.ಆರ್.ಜಗದೀಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಡೂರು-ಬಾಣಾವರ ಮಧ್ಯೆ ಇರುವ ಬಯಲು ಬಸವೇಶ್ವರ ಸಮುದಾಯಭವನದಲ್ಲಿ ಬೆಳಗ್ಗೆ ೭.೩೦ ರಿಂದ ಸಂಜೆ ೬.೩೦ ರವರೆಗೆ ಈ ಮೂರು ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ೯ ಗಂಟೆಗೆ ಯಳನಾಡು ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭುದೇಶಿಕೇಂದ್ರ ಮಹಾಸ್ವಾಮಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕ್ವಿಜ್ ಕಾರ್ಯಕ್ರಮವಿದೆ. ವೇದಿಕೆ ಕಾರ್ಯಕ್ರಮದಲ್ಲಿ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಮಹಾಸ್ವಾಮಿ ಭಾವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಟಾಪ್ ೧೦ ಚಿಕ್ಕಮಗಳೂರಿನ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ೨೦೨೩ ನೇ ಸಾಲಿನಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದ ೫೦೦ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ರಾಜ್ಯದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಮಧ್ಯಾಹ್ನದ ನಂತರ ಮತ್ತೆ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಂದ ಹಿತನುಡಿ, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದೆಲ್ಲಡೆ ನೊಳಂಬ ಸಮಾಜದ ವಿದ್ಯಾರ್ಥಿ, ಪೋಷಕರು ಆಗಮಿಸುತ್ತಿದ್ದು ಜಿಲ್ಲೆಯ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ನೊಳಂಬ ಸಮಾಜದ ೧೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸಮಾಜದವರನ್ನು ಒಗ್ಗೂಡಿಸುವ ಪ್ರಯತ್ನವಾಗಿ ಎನ್ಎಸ್ಎಸ್ ಕಳೆದ ೩ ವರ್ಷದ ಹಿಂದೆಯೇ ಸ್ಥಾಪಿಸಲಾಗಿದೆ. ಸಮಾಜದಲ್ಲಿನ ಬಡ ವಿದ್ಯಾರ್ಥಿಗಳು, ವಿಶೇಷಚೇತನರು, ಅನಾಥರು, ಬುದ್ದಿಮಾಂಧ್ಯ ಮಕ್ಕಳು, ವಿಧವೆಯರ, ಅಸಕ್ತರ, ವಯೋವೃದ್ಧರ ಕ್ಷೇಮಾಭಿವೃದ್ಧಿಗಾಗಿ ಸಂಘದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಸಮಾಜದ ಬಂಧುಗಳಿಗೆ ಆರೋಗ್ಯ ಮೇಳ, ರಕ್ತದಾನಶಿಬಿರ, ಉದ್ಯೋಗಮೇಳ, ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ನಡೆಸುವುದು ಸಂಘದ ಉದ್ದೇಶವಾಗಿದೆ. ೨೦೨೧ ರಲ್ಲಿ ಸ್ಥಾಪನೆಯಾದ ಸಂಘದಲ್ಲಿ ೧೮ ಸಾವಿರ ಮಂದಿ ಸದಸ್ಯರಿದ್ದಾರೆ. ಈಗಾಗಲೇ ಎರಡು ನೊಳಂಬ ಜಾತ್ರೆಗಳು ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವುದು ೩ ನೇ ನೊಳಂಬ ಜಾತ್ರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸತೀಶ್, ಲಲಿತಾಗೌಡ, ರಾಜಪ್ಪ, ಚಂದ್ರೇಗೌಡ, ಜಯದೇವಪ್ಪ, ಪುಪ್ಪೇಗೌಡ ಮತ್ತಿತರರಿದ್ದರು.
Nolamba Lingayat Samajim Pratibha Puraskar-honor for achievers