ಚಿಕ್ಕಮಗಳೂರು: ಶಿಕ್ಷಕರ ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಈಗಾಗಲೇ ೬ ವರ್ಷಗಳ ಕಾಲ ಹೋರಾಟ ಮಾಡಿ ಸುದೀರ್ಘವಾಗಿ ಶಿಕ್ಷಕರೊಂದಿಗೆ ನಿಕಟ ಸಂಬಂಧವಿಟ್ಟುಕೊಂಡು ಬಂದಿರುವುದರಿಂದ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ನಗರದ ಜೂನಿಯರ್ ಕಾಲೇಜಿನಲ್ಲಿ ನಡೆದ ನೈರುತ್ಯ ಶಿಕ್ಷಕರ-ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ೭ ಶಿಕ್ಷಕರ ಕ್ಷೇತ್ರ, ೭ ಪದವೀಧರ ಕ್ಷೇತ್ರಗಳು ಬರಲಿದ್ದು, ಸಮಾಜದ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡುವ ಪ್ರತಿಭಾವಂತರು, ಸಮಾಜವನ್ನು ತಿದ್ದಿ ತೀಡುವಂತಹ ಹಾಗೂ ವಿದ್ಯಾರ್ಥಿಗಳನ್ನು ಮುಂದಿನ ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಇರುವ ಪದವೀಧರರು ಮತ್ತು ಶಿಕ್ಷಕರು ಮತದಾನ ಮಾಡುವ ಚುನಾವಣೆಯಾಗಿದೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಒಟ್ಟಾಗಿ ಈ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಬೆಂಬಲ ಇರುವುದು ಗೆಲುವಿಗೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದು ಈ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸೇರಿರುವುದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ಹತ್ತಿರವಾಗುತ್ತಿದೆ ಎಂದರು.
ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಉತ್ತಮ ವೈದ್ಯರಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಮುಖವಾಗಿ ಬಿಜೆಪಿಯ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವುದರಿಂದ ನಮ್ಮಿಬ್ಬರ ಗೆಲುವು ಶತಸಿದ್ದ ಎಂದು ತಿಳಿಸಿದರು.
ತಾವು ಪರಿಷತ್ ಸದಸ್ಯರಾದ ನಂತರ ಶಿಕ್ಷಕರ ಕ್ಷೇತ್ರದಲ್ಲಿ ಹಲವಾರು ಅಮೂಲಾಗ್ರ ಬದಲಾವಣೆಗಳನ್ನು ತಂದು ನ್ಯಾಯಾಲಯದ ಆದೇಶ ನೀಡಿದ ಪರಿಣಾಮ ಇಂದು ಸಾವಿರಾರು ಶಿಕ್ಷಕರು ಶಾಂತಿಯುತವಾಗಿ ಉತ್ತಮ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರು.
ಖಾಸಗಿ ಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡಿದ್ದು, ನಾನು ಓರ್ವ ಸಮಿತಿ ಸದಸ್ಯನಾಗಿರುವುದರಿಂದ ೧೦ ವರ್ಷಗಳವರೆಗೆ ಕೊಡಬೇಕೆಂದು ಹೋರಾಟ ಮಾಡಿದ್ದೇನೆ. ಈಗ ೫ ವರ್ಷ ಕೊಟ್ಟಿದ್ದಾರೆ. ಮುಂದೆ ೧೦ ವರ್ಷಕ್ಕೆ ಕೊಡುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
೧೨ ಸಾವಿರಕ್ಕೆ ಕೆಲಸ ಮಾಡುತ್ತಿದ್ದ ಅತಿಥಿ ಉಪನ್ಯಾಸಕರು ಇಂದು ೩೫ ಸಾವಿರ ರೂ ವೇತನ ಪಡೆಯುತ್ತಿದ್ದಾರೆ, ಬಿಲ್ಡಿಂಗ್ ಕ್ಲಿಯರೆನ್ಸ್, ಪರಿಷತ್ನಲ್ಲಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ ಫಲವಾಗಿ ಇವೆಲ್ಲಾ ಜಾರಿಗೆ ಬಂದಿವೆ. ಎನ್ಪಿಎಸ್ ಬಗ್ಗೆ ಸದನದಲ್ಲಿ ಸಾಕಷ್ಟು ಬಾರಿ ವಿಷಯ ಚರ್ಚೆ ಮಾಡಿದ್ದೇನೆ ಆದರೆ ಸರ್ಕಾರ ಇನ್ನೂ ಓಪಿಎಸ್ ಜಾರಿಮಾಡಿಲ್ಲ ಎಂದು ಆರೋಪಿಸಿದರು.
ಮೂರು ಬಾರಿ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಿರುವುದು ರಾಜ್ಯದ ಇತಿಹಾಸ. ಶಿಕ್ಷಕರಿಗೆ ಬಡ್ತಿ ಎನ್ನುವುದು ಮರೀಚಿಕೆಯಾಗಿತ್ತು, ಪ್ರೌಢಶಾಲೆಯಲ್ಲಿದ್ದ ಶಿಕ್ಷಕರು ಇದರನ್ವಯ ಪಿಯು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಇದ್ದಿದ್ದರಿಂದ ಇದು ತಡೆಯಾಗಿದ್ದು ಇಂದು ಶಿಕ್ಷಕರು ಉತ್ತರ ನೀಡಿದ್ದಾರೆ. ಜೂ.೬ ರಂದು ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಿದರು.
Responding to teachers’ burning issues is the key to victory