ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ೨,೫೮,೯೦೩ ಮತಗಳ ಅಂತರದಿಂದ ಕಾಂಗ್ರೆಸ್ನ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಪರಾಭವಗೊಳಿಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ಒಟ್ಟು ೭,೩೧,೪೦೮ ಮತಗಳನ್ನು ಗಳಿಸಿದ್ದು, ಜಯಪ್ರಕಾಶ ಹೆಗ್ಡೆ ಅವರು ೪,೭೨,೫೦೫ ಗಳಿಸಿದ್ದಾರೆ. ಈ ಬಾರಿ ೧೧೨೫೭ ಮತಗಳ ನೋಟಾ ಪರವಾಗಿ ಚಲಾವಣೆ ಆಗಿದ್ದು, ಮೂರನೇ ಸ್ಥಾನದಲ್ಲಿದೆ, ೫೪೧೪ ಮತಗಳನ್ನು ಗಳಿಸಿರುವ ಬಿಎಸ್ಪಿಯ ಕೆ.ಟಿ.ರಾಧಾಕೃಷ್ಣ ನಾಲ್ಕನೇ ಸ್ಥಾನದಲ್ಲಿದ್ದು, ಉಳಿದವರು ನಂತರದ ಸ್ಥಾನಗಳಲ್ಲಿದ್ದಾರೆ.
ಉಡುಪಿಯಲ್ಲಿ ಮತ ಎಣಿಕೆ ನಡೆದು ಬಿಜೆಪಿ ಮುನ್ನಡೆ ಗಳಿಸುತ್ತಿದ್ದಂತೆ ಚಿಕ್ಕಮಗಳೂರಿನಿಂದ ತೆರಳಿದ್ದ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಉಡುಪಿಯಿಂದ ಜಾಗ ಖಾಲಿ ಮಾಡಿದರು. ಇತ್ತ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತು. ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಹಲವು ಮುಖಂಡರು ಪರಸ್ಪರ ಸಂತಸ ಹಂಚಿಕೊಂಡರು. ಮಧ್ಯಾಹ್ನದ ವೇಳೆಗೆ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಸೇರಿ ಕೋಟಾ ಶ್ರೀನಿವಾಸ ಪೂಜಾರಿ ಗೆಲುವಿಗೆ ಸಂಭ್ರಮ ಆಚರಿಸಿದರು.
ಜಿಲ್ಲೆಯಲ್ಲಿ ೫ ಶಾಸಕರನ್ನು ಗೆದ್ದು ಬೀಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿನ ಹೀನಾಯ ಸೋಲು ಮುಖಭಂಗ ಉಂಟುಮಾಡಿದೆ. ಕೇವಲ ಒಂದೇ ವರ್ಷದಲ್ಲಿ ಕಾಂಗ್ರೆಸ್ನ ಸಂಭ್ರಮವನ್ನು ಈ ಸೋಲು ಕಿತ್ತುಕೊಂಡಿದೆ. ವಿಧಾನಸಭೆಯಲ್ಲಿ ದಕ್ಕಿಸಿಕೊಂಡಿದ್ದ ಅಚ್ಚರಿಯ ಗೆಲುವು ಮರುಕಳಿಸುತ್ತದೆ ಎನ್ನುವ ಕಾಂಗ್ರೆಸ್ನ ನಂಬಿಕೆ ಹುಸಿಯಾಗಿದೆ.
ನೋಟಾಗೆ ಮೂರನೇ ಸ್ಥಾನ
ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಂತರ ನೋಟಾ ಪರವಾಗಿ ಅತೀ ಹೆಚ್ಚು ಮತಗಳು ಚಲಾವಣೆ ಗೊಂಡಿರುವುದು ಗಮನಾರ್ಹವಾಗಿದೆ.
ಬಿಜೆಪಿಗೆ ೭,೩೧,೪೦೮ ಮತಗಳು, ಕಾಂಗ್ರೆಸ್ಗೆ ೪,೭೨,೫೦೫ ಮತಗಳು ಲಭಿಸಿದ್ದು ೧೧,೨೫೭ ಮತಗಳು ನೋಟಾ ಪರ ಚಲಾವಣೆಗೊಂಡಿವೆ. ೫೪೧ ಮತಗಳನ್ನು ಗಳಿಸಿರುವ ಬಿಎಸ್ಪಿ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ನಾಲ್ಕನೆ ಸ್ಥಾನದಲ್ಲಿದ್ದರೆ ಉಳಿದವರು ನಂತರದ ಸ್ಥಾನಗಳಿಸಿದ್ದಾರೆ.
ಈ ಬಾರಿ ಕಣದಲ್ಲಿದ್ದ ಅಬ್ಯರ್ಥಿಗಳು ಗಳಿಸಿರುವ ಒಟ್ಟು ಮತಗಳ ವಿವರ ಕೆಳಕಂಡಂತಿದೆ
- ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ)-೭,೩೧,೪೦೮
- ಕೆ.ಜಯಪ್ರಕಾಶ ಹೆಗ್ಡೆ (ಕಾಂಗ್ರೆಸ್)-೪,೭೨,೫೦೫
- ಎಂ.ಕೆ.ದಯಾನಂದ (ಪ್ರೌಟಿಸ್ಟ್ ಸರ್ವ ಸಮಾಜ ಪಕ್ಷ)-೧೦೬೯
- ಎಲ್.ರಂಗನಾಥ್ ಗೌಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)-೫೩೯
- ಶಬರೀಶ್ (ಕರುನಾಡ ಸೇವಕರ ಪಕ್ಷ)-೫೬೪
- ಬಿ.ಕೆ.ಸಚಿನ್ (ಉತ್ತಮ ಪ್ರಜಾಕೀಯ ಪಕ್ಷ)-೧೩೩೧
- ಸುಪ್ರೀತ್ ಕುಮಾರ್ ಪೂಜಾರಿ ಕಟೀಲ್ (ಜನಹಿತ ಪಕ್ಷ)-೬೯೦
- ಜಿ.ವಿಜಯಕುಮಾರ್ (ಪಕ್ಷೇತರ)-೯೫೫
- ಸುಧೀರ್ ಕಾಂಚನ್ ಮರ್ಕಳ (ಪಕ್ಷೇತರ)-೨೨೭೮
- ನೋಟಾ-೧೧೨೫೭
NOTA third position in Udupi-Chikkamagaluru Lok Sabha elections