ಚಿಕ್ಕಮಗಳೂರು: ಕಳೆದೊಂದು ವಾರದಿಂದ ಬಿದ್ದ ಭಾರಿ ಮಳೆಗೆ ಮೂಗ್ತಿಹಳ್ಳಿ ದೊಡ್ಡಕೆರೆ ಕೋಡಿ ಬಿದ್ದಿದ್ದು ಮೂಗ್ತಿಹಳ್ಳಿ ಪಂಚಾಯಿತಿಯಿಂದ ಇಂದು ಬಾಗಿನ ಅರ್ಪಿಸಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಪಂಚಾಯಿತಿ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದರು.
ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿಯೊಂದಿಗೆ ಅರ್ಪಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇತ್ತು, ಮಳೆಯಿಂದ ಕೆರೆ ತುಂಬಿರುವುದು ಎಲ್ಲಾ ಗ್ರಾಮಸ್ಥರಿಗೆ ಸಂತಸ ತಂದಿದೆ ಎಂದರು.
ಹಿಂದಿನ ಸರ್ಕಾರ ಈ ಕೆರೆ ಅಭಿವೃದ್ಧಿಗೆ ೧.೮೦ ಕೋಟಿ ರೂ ಮಂಜೂರಾಗಿದ್ದು, ಕಾಮಗಾರಿ ಕಳಪೆಯಿಂದ ನಡೆಯುತ್ತಿದೆ. ಈ ಸಂಬಂಧ ಇಂಜಿನಿಯರ್ಗೆ ದೂರವಾಣಿ ಮೂಲಕ ಹಾಗೂ ಖುದ್ದಾಗಿ ದೂರು ಸಲ್ಲಿಸಿದ್ದು, ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಈ ಬಗ್ಗೆ ಸ್ಥಳೀಯ ಶಾಸಕರು ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.
ಮೂಗ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲಿ, ಗ್ರಾಮಗಳಲ್ಲಿ ಮಳೆಗಾಲವಾಗಿರುವುದರಿಂದ ಕೆಲವರಲ್ಲಿ ಜ್ವರ ಇದೆ, ಡೆಂಗ್ಯೂ ಜ್ವರದ ಪ್ರಕರಣಗಳಲ್ಲಿ ಈ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಫಾಗಿಂಗ್, ಪೌಡರ್ ಸಿಂಪರಣೆ ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ ನಿನ್ನೆ ಬಿದ್ದ ಮಳೆ ಪರಿಣಾಮ ಮೂಗ್ತಿಹಳ್ಳಿ ದುಂಗೆರೆ, ಮತ್ತಾವರ ಗ್ರಾಮದಲ್ಲಿ ಮನೆಗಳು ಬಿದ್ದಿರುವುದಾಗಿ ವರದಿಯಾಗಿದೆ. ಪರಿಶೀಲಿಸಲು ಪಿಡಿಒ ಸಹಿತ ಸದಸ್ಯರೊಂದಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ಅಂಬಿಕಾಪ್ರಕಾಶ್ ಮಾತನಾಡಿ, ಕೆರೆ ತುಂಬಿರುವುದರಿಂದ ಮುಂದೆ ಬರಗಾಲ ಬಾರದಂತೆ ಪ್ರಾರ್ಥಿಸಿ ಕೆರೆಗೆ ಬಾಗಿನ ಬಿಟ್ಟಿದ್ದೇವೆ. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಗ್ರಾಮ ಪಂಚಾಯಿತಿ ನಿನ್ನ ಸರ್ವೆ ಮಾಡಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಅಂಬಿಕಾಮಧುಸೂದನ್, ಗಿರೀಶ್, ಪದ್ಮಾರಾಜಶೇಖರ್, ಪ್ರಭಾಕರ್, ಮಂಜುನಾಥ್ ಎಮ್.ಎಸ್, ಪದ್ಮಾ, ಸವಿತ, ನವೀನ್ಕುಮಾರಿ, ಕಮಲಾಕ್ಷಿ, ಸಂದೀಪ್, ಸತೀಶ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಿಕ್ರಾಂತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರತ್ನಾಕರ್, ಉಪಸ್ಥಿತರಿದ್ದರು.
Offering of water to Moogtihalli Doddakere