ಚಿಕ್ಕಮಗಳೂರು: ಕೇಂದ್ರ ಸರಕಾರದ ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು, ಇದನ್ನು ಕೇಂದ್ರ ಸರಕಾರ ಮಾನ್ಯ ಮಾಡಬೇಕೆಂದು ಒತ್ತಡ ಹೇರುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕೇಂದ್ರದ ಬಳಿ ನಿಯೋಗ ತೆರಳಲು ವಿವಿಧ ಸಂಘಟನೆಗಳ ಮುಖಂಡರು ಶನಿವಾರ ನಗರದಲ್ಲಿ ನಡೆಸಿದ ಸಭೆಯಲ್ಲಿ ನಿರ್ಣಯಕೈಗೊಂಡಿದ್ದಾರೆ.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಫಿ ಬೆಳೆಗಾರರ ಸಂಘ ಹಾಗೂ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಸಭೆಯಲ್ಲಿ ಮಾತನಾಡಿದ ಮುಖಂಡರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ಜನರ ಜೀವನ ಬೀದಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರಕಾರ ವರದಿ ಅನುಷ್ಠಾನವನ್ನು ತಿರಸ್ಕರಿಸಿದೆ ಎಂದರು.
ವರದಿ ಅನುಷ್ಠಾನದಿಂದ ಮಲೆನಾಡಿನ ಜನರ ಮೇಲಾಗುವ ಸಾಧಕ ಬಾಧಕಗಳನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಂಡು ಕೇಂದ್ರ ಸರಕಾರ ಮೇಲೆ ಒತ್ತಡ ಹೇರಬೇಕು. ಜನಪ್ರತಿನಿಧಿಗಳು, ಬೆಳೆಗಾರರು ಮತ್ತು ಜನಸಾಮಾನ್ಯರನ್ನೊಳಗೊಂಡ ನಿಯೋಗ ರಚಿಸಿ ನಿಯೋಗ ಕೇಂದ್ರ ಸರಕಾರದ ಬಳಿಗೆ ತೆರಳಿ ಸರಕಾರ ಕೊಡುವ ಕೆಲಸ ಆಗಬೇಕೆಂದರು.
ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ತೀರ್ಮಾನಿಸಿದ್ದು, ಸರಕಾರದ ತೀರ್ಮಾನವನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಬಗ್ಗೆ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಮಲೆನಾಡಿನ ಅರಣ್ಯ ಪ್ರದೇಶವನ್ನು ಉಳಿಸುವ ನಿಟ್ಟಿನಲ್ಲಿ ಯಾವುದೇ ಹೊಸ ಯೋಜನೆಗಳು ಬೇಡ, ಈಗಾಗಲೇ ಜಾರಿಗೊಳಿಸಿರುವ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗಬೇಕು. ಕೇಂದ್ರ ಸರಕಾರಕ್ಕೆ ನಿಯೋಗ ತೆರಳುವ ಮುನ್ನ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ ಮನವರಿಕೆ ಮಾಡಿ ಮೇಲೆ ಒತ್ತಡ ಹೇರಬೇಕೆಂದರು.
ಸಭೆಯಲ್ಲಿ ಕೆಜಿಎಫ್ ಉಪಾಧ್ಯಕ್ಷ ಎ.ಕೆ. ವಸಂತೇಗೌಡ, ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಎಸ್. ವಿಜಯ ಕುಮಾರ್, ಮೂಡಿಗೆರೆ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ವಸ್ತಾರೆಯ ಟಿ.ಡಿ.ಮಲ್ಲೇಶ್, ರತೀಶ್, ಮನು ಮೂಡಿಗೆರೆ, ಶಂಕರ್, ಜಾಗರ ರವಿ, ಜೆಡಿಎಸ್ನ ರವಿ ಬೆನಕ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಟಿ.ರಾಜಶೇಖರ್, ಕೆ.ಕೆ. ರಘು ಮತ್ತಿತರರು ಇದ್ದರು.
A meeting of coffee growers was held at Okkaligara Community Hall in the city