ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾ.೧ ರಿಂದ ಮಾಜಿ ಪ್ರಧಾನಮಂತ್ರಿ ಅಟಲ್‌ಬಿಹಾರಿ ಪಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಯಶಸ್ವಿ ಹಾಗೂ ವಿಜೃಂಭಣೆಯಿಂದ ವರ್ಷ ಪೂರ್ತಿ ಆಚರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಎಲ್ಲ ಮಂಡಲಗಳಲ್ಲಿ ವಾಜಪೇಯಿ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಸಮಿತಿ ರಚಿಸಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಶ್ರೀ ಜಿಲ್ಲಾ ಸಂಚಾಲಕರಾಗಿದ್ದಾರೆ ಎಂದರು.
ಫೆ.೨೮ ರೊಳಗಾಗಿ ಎಲ್ಲ ಮಂಡಲಗಳಲ್ಲಿ ಅಟಲ್‌ಜಿ ಅವರ ಕಾಲಘಟ್ಟದಲ್ಲಿ ಅವರೊಂದಿಗಿನ ಅನುಭವಗಳನ್ನು ಹೊಂದಿದ್ದವರನ್ನು ಭೇಟಿಮಾಡಿ ಅವರ ನೆನಪುಗಳನ್ನು ಮೆಲುಕು ಹಾಕುವುದು ಮತ್ತು ಅವರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.
ಮಾ.೧ ರಿಂದ ೫ರವರೆಗೆ ಎಲ್ಲ ಮಂಡಲಗಳಲ್ಲಿ ಅಟಲ್‌ಜಿ ಬಗ್ಗೆ ವಿಚಾರ ಸಂಕಿರಣ, ಮಾ.೧೦ ರಿಂದ ೧೪ ರವರೆಗೆ ಭಾಷಣ, ಪ್ರಬಂಧ, ರಂಗೋಲಿ, ಚಿತ್ರಕಲೆ ಮತ್ತಿತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಾ.೧೫ ರಂದು ಜಿಲ್ಲಾಮಟ್ಟದ ಅಟಲ್ ಜೀ ವಿರಾಸತ್ ಸಮ್ಮೇಳನ ನಡೆಸಲಾಗುತ್ತದೆ. ಅಟಲ್‌ಜಿ ಸಾಧನೆ ಕುರಿತ ಚಿತ್ರ ಪ್ರದರ್ಶನ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಅಟಲ್‌ಜಿ ಅವರ ವ್ಯಕ್ತಿತ್ವದ ಬಗ್ಗೆ ವಿಷಯ ಮಂಡನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಸರಕಾರ ಬಂದು ೨೧ ತಿಂಗಳು ಕಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಗೆಸ್ಟ್ ಅಪೀಯರೆನ್ಸ್ ಆಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರ ತೋಟಕ್ಕೆ ಮತ್ತು ರಾಷ್ಟ್ರಧ್ವಜ ಹಾರಿಸಲು ಮಾತ್ರ ಜಿಲ್ಲೆಗೆ ಬರುತ್ತಿದ್ದು, ಜಿಲ್ಲೆಯ ಜನತೆ ಬಗ್ಗೆ ಈ ಮಂತ್ರಿಗೆ ಕಾಳಜಿ ಇಲ್ಲ ಎಂದು ದೂರಿದರು.
ಗ್ಯಾರಂಟಿ ಹಣ ಬಿಡುಗಡೆಯಾಗಿಲ್ಲ ಎಂದು ಜನ ಕೇಳುತ್ತಿದ್ದಾರೆ ಎಂದರೆ ನಾವು ಅವರಿಗೆ ಮಾಸಿಕ ವೇತನ ನೀಡುತ್ತಿಲ್ಲ ಎಂದು ಜಾರ್ಜ್ ಹೇಳುವ ಮೂಲಕ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ. ಗ್ಯಾರಂಟಿ ಕೊಡಿ ಎಂದು ಕೇಳಿದವರ್‍ಯಾರು? ಕೊಟ್ಟ ಮೇಲೆ ಸಮರ್ಪಕವಾಗಿ ನೀಡುವುದು ಅವರ ಹೊಣೆಯಲ್ಲವೇ ಎಂದು ಪ್ರಶ್ನಿಸಿದರು.
ಜಿಲ್ಲೆಯ ಮುಳ್ಳಯ್ಯನಗಿರಿ ಭಾಗಕ್ಕೆ ಬೆಂಕಿ ಬಿದ್ದಿದ್ದು, ಇತರೆ ಕಡೆ ಬೆಂಕಿ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ರಸ್ತೆಗಳು ಗುಂಡಿಗೊಟರಿನಿಂದ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ಧಿಗೆ ಹಣವಿಲ್ಲ ಎಂದು ಶಾಸಕರೆ ಹೇಳಿಕೊಂಡಿದ್ದಾರೆ ಎಂದರು.
ಮುಖಂಡ ವೆಂಕಟೇಶ್ ಮಾತನಾಡಿ, ಕಾಂಗ್ರೆಸ್ ಸರಕಾರದಲ್ಲಿ ಒಂದೇ ಒಂದು ವಸತಿ ಯೋಜನೆಯ ಮನೆ ಮಂಜೂರಾಗಿಲ್ಲ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚೈತ್ರಶ್ರೀ, ಪುಷ್ಪರಾಜ್, ದಿನೇಶ್, ಕನಕರಾಜ್ ಅರಸ್, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರಿದ್ದರು.
Birth centenary of Atal Bihari Pajpayee from March 1

Leave a Reply