ಚಿಕ್ಕಮಗಳೂರು: ಕೌಶಲ್ಯಭರಿತ ವೃತ್ತಿ ಪರ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೀಘ್ರ ಪರಿಹಾರವಾಗುತ್ತದೆ. ಆರ್ಥಿಕ ಸ್ವಾವಲಂಬನೆಗೆ ಇಂತಹ ಕೋರ್ಸ್‌ಗಳು ಮಾರ್ಗದರ್ಶನ ನೀಡುತ್ತವೆ ಎಂದು ಸಮಗ್ರ ಶಿಕ್ಷಣದ ಉಪ ಯೋಜನಾ ಸಮನ್ವಯಾಧಿಕಾರಿ ಪಿ.ಲೋಕೇಶ್ ತಿಳಿಸಿದರು.
ಕಳಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಶಿಕ್ಷಣ ಚೌಕಟ್ಟು ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಈಗಂತೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ, ಮಕ್ಕಳ ಉತ್ತೇಜನಕ್ಕಾಗಿ ಯಥೇಚ್ಛವಾಗಿ ಅನುದಾನವನ್ನು ನೀಡುತ್ತಿದೆ. ಇದು ಶೇ.೧೦೦ರಷ್ಟು ಮಕ್ಕಳಿಗಾಗಿಯೇ ವಿನಿಯೋಗವಾಗಬೇಕು ಎಂದರು.
ಡಯೆಟ್ ಉಪನ್ಯಾಸಕಿ ಸಲೇಹ ಅಂಜುಂ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂತಹ ವಿಷಯಗಳ ಅಧ್ಯಯನದಿಂದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜರಾವ್ ಎಚ್.ಎಂ. ಮಾತನಾಡಿ, ನಿಮ್ಮ ಪ್ರತಿ ಹೆಜ್ಜೆಯಲ್ಲೂ ತಂದೆ ತಾಯಿಯರ ಕನಸಿರಬೇಕು. ಅವರ ಬೆವರಿನ ಫಲವೇ ನಮ್ಮ ಜೀವನ. ಓದುತ್ತಿರುವಾಗಲೇ ದುಡಿಮೆ ಮಾಡುತ್ತಾ, ನಿಮ್ಮ ಶಿಕ್ಷಣದ ವೆಚ್ಚವನ್ನು ನೀವೇ ಭರಿಸಲು ಅನುಕೂಲವಾಗುವಂತಹ ಎನ್.ಎಸ್.ಕ್ಯು.ಎಫ್ (ರಾಷ್ಟ್ರೀಯ ಕೌಶಲ್ಯ ಶಿಕ್ಷಣ ಚೌಕಟ್ಟು) ನಂತಹ ಕೋರ್ಸ್‌ಗಳು ಹೊಸ ಭರವಸೆಯಾಗಿವೆ ಎಂದರು.
ಡಯಟ್‌ನ ನೋಡಲ್ ಅಧಿಕಾರಿ ಸಂಧ್ಯಾ ಮಾತನಾಡಿ, ಮಕ್ಕಳು ತಮ್ಮ ಕೌಶಲ್ಯವನ್ನು ತಾವು ಅರಿತುಕೊಂಡು ಅದಕ್ಕೆ ಪೂರಕ ಶಿಕ್ಷಣ ಪಡೆಯಬೇಕು ಎಂದರು. ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾದ ಸುಬ್ರಹ್ಮಣ್ಯ ಹಾಗೂ ಮೂರ್ತಿ, ಎಸ್.ಡಿ.ಎಂ.ಸಿ.ಯ ಅಧ್ಯಕ್ಷ ಚೇತನ್, ಸದಸ್ಯರು, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ತಿಮ್ಮಪ್ಪ, ಪ್ರೌಢಶಾಲಾ ವಿಭಾಗದ ಎಫ್.ಡಿ.ಎ.ಪ್ರವೀಣ್ ಹಾಗೂ ಪ್ರಾಥಮಿಕ ವಿಭಾಗದ ಸಹಶಿಕ್ಷಕರು ಉಪಸ್ಥಿತರಿದ್ದರು.
ಇದೇ ವೇಳೆ ವಿಜ್ಞಾನ, ಸಮಾಜ, ಎನ್‌ಎಸ್‌ಕ್ಯೂಎಫ್ ಪ್ರಯೋಗಾಲಯ ಹಾಗೂ ನೂತನ ಗ್ರಂಥಾಲಯವನ್ನು ಗಣ್ಯರು ಉದ್ಘಾಟಿಸಿದರು. ಅನಘ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಮಾ ಸ್ವಾಗತಿಸಿದರು. ಶಿಕ್ಷಕ ತೇಜೋಮೂರ್ತಿ ನಿರೂಪಿಸಿದರು. ಶಿಕ್ಷಕ ಚಂದ್ರಶೇಖರ್ ವಂದಿಸಿದರು.
Skilled vocational studies are a solution to unemployment
