ಚಿಕ್ಕಮಗಳೂರು: ಭಾರತ ದೇಶದ ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಯುವಜನಾಂಗಕ್ಕೆ ಪರಿಚಯಿಸಿ ಆಚರಣೆಗೆ ತರುವ ಪ್ರಯತ್ನ ಮಾಡುವ ಅಗತ್ಯ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.
ಅವರು ಸಮೀಪಕ ಸುಕ್ಷೇತ್ರ ಬೀಕನಹಳ್ಳಿಯಲ್ಲಿ ೭೪ನೇ ವರ್ಷದ ನವರಾತ್ರಿ ಸಮಾರೋಪದ ಅಂಗವಾಗಿ ದೇವಿ ಮಹಾತ್ಮೆ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಧರ್ಮ, ಸಂಸ್ಕಾರದ ಮೇಲೆ ಭಾರತ ದೇಶದ ನೆಲೆ ಗಟ್ಟಿಯಾಗಿದೆ. ಈ ನಿಟ್ಟಿನಲ್ಲಿ ಸುಮಾರು ೭೪ ವರ್ಷಗಳಿಂದ ಸುಕ್ಷೇತ್ರ ಬೀಕನಹಳ್ಳಿಯಲ್ಲಿ ತಾಯಿ ಚಾಮುಂಡೇಶ್ವರಿ ನವರಾತ್ರಿ-ದಸರಾ ಉತ್ಸವ ವಿಜೃಂಭಣೆಯಿಂದ ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.
ಬೀಕನಹಳ್ಳಿಯಲ್ಲಿ ಚಾಮುಂಡೇಶ್ವರಿ ದೇವಿ ಶಕ್ತಿ ದೇವತೆಗಳ ಅವತಾರ ತಾಳಿದ್ದು, ದುಷ್ಟ ಶಕ್ತಿ ಸಂಹಾರ ಮಾಡುವ ಉದ್ದೇಶದೊಂದಿಗೆ ನಾಡು ಮತ್ತು ಜನರ ರಕ್ಷಣೆ ಮಾಡಲು ಅವತರಿಸಿರುವುದು ಇತಿಹಾಸ ಎಂದು ತಿಳಿಸಿದರು.
ಈಗಲೂ ಬೇರೆ ಬೇರೆ ರೂಪದಲ್ಲಿ ದುಷ್ಟಶಕ್ತಿಗಳಿವೆ, ಅವುಗಳನ್ನು ಸಂಹಾರ ಮಾಡಿ ಭಕ್ತರನ್ನು ರಕ್ಷಣೆ ಮಾಡುತ್ತಿರುವ ಶ್ರೀ ಚಾಮುಂಡೇಶ್ವರಿ ತಾಯಿ ದುರ್ಗೆ, ಚೌಡೇಶ್ವರಿ ಈ ರೀತಿ ನಾನಾ ಶಕ್ತಿ ದೇವತೆಗಳಾಗಿ ಅವತರಿಸಿದೆ ಎಂದರು.
ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಾಡು, ಗ್ರಾಮ, ದೇಶದಲ್ಲಿ ನಡೆಯುವುದನ್ನು ಬಿಟ್ಟರೆ ಬೇರೆ ಯಾವುದೇ ದೇಶದಲ್ಲಿ ಕಾಣಲು ಅಸಾಧ್ಯ. ತಾವು ವಿದೇಶದ ಪ್ರವಾಸದ ಸಂದರ್ಭದಲ್ಲಿ ನಮ್ಮವರನ್ನು ಕಂಡಾಗ ಅವರು ನೀಡಿದ ಸತ್ಕಾರ್ಯಗಳು ಅತೀವ ಸಂತಸ ತಂದಿತು. ಅದೇ ಭಾರತ ಮಾತೆಯ ಶಕ್ತಿ ಎಂದು ಬಣ್ಣಿಸಿದರು.
ದೇವಿ ಮಹಾತ್ಮೆ (ಮಹಿಷಾಸುರ ಮರ್ಧಿನಿ) ನಾಟಕ ಪ್ರದರ್ಶನ ವೀಕ್ಷಿಸುವ ಭಕ್ತರ ಮನಸ್ಸಿನಲ್ಲಿ ಧಾರ್ಮಿಕ ಭಾವನೆ ನೆಲೆಯೂರಲಿ ಎಂದು ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಸ್ವಾಗತಿಸಿ ಮಾತನಾಡಿ, ಜಾತಿ, ಮತ, ಬೇಧಭಾವ ಮಾಡದೆ ಸರ್ವರೂ ಭಾಗವಹಿಸುವ ಪುಣ್ಯಸ್ಥಳ ಸುಕ್ಷೇತ್ರ ಚಾಮುಂಡೇಶ್ವರಿ ದೇವಿ ಸನ್ನಿಧಾನ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಬಿ.ಪಿ ನಂಜಪ್ಪ, ಉಪಾಧ್ಯಕ್ಷ ಬಿ.ಹೆಚ್ ಗುರುಬಸಪ್ಪ, ರಾಜಶೇಖರ್, ವಿಜಯ್‌ಕುಮಾರ್, ಕಾರ್ಯದರ್ಶಿ ಬಿ.ಎಂ ಯೋಗಾನಂದ್, ಖಜಾಂಚಿ ಬಿ.ಹೆಚ್ ಸೋಮೇಗೌಡ, ಸದಸ್ಯರುಗಳಾದ ನಂಜುಂಡಪ್ಪ, ಗುರುಸಿದ್ದಪ್ಪ, ಯತಿರಾಜ್. ಲೋಕನಾಥ್, ರಂಗಪ್ಪ, ಬಿ.ಎಂ ನಾಗರಾಜು, ಲಲಿತಾ ಬಸವರಾಜ್, ಬಿ.ಎಸ್ ಪರಮೇಶ್ವರಪ್ಪ, ಚಂದ್ರಾಚಾರ್, ಮಲ್ಲಿಕಾರ್ಜುನ್, ಹಾಗೂ ಸಿದ್ದೇಶ್ವರ, ಕಲ್ಲೇಶ್ವರ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Introduce Indian religion and culture to the youth
