ಚಿಕ್ಕಮಗಳೂರು: ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ದೌರ್ಜನ್ಯದಡಿ ದಾಖಲಾದ ಪ್ರಕರಣಗಳಿಗೆ ಶೀಘ್ರವಾಗಿ ನ್ಯಾಯ ಸಿಗುವಂತೆ ಎಲ್ಲಾ ಅಧಿಕಾರಿಗಳು ತ್ವರಿತ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ದೌರ್ಜನ್ಯ ನಿಯಂತ್ರಣ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದಾಖಲಾದ ಪ್ರಕರಣಗಳಿಗೆ ಪರಿಹಾರ ಧನ ಮಂಜೂರು ಮಾಡಲು ಹಾಗೂ ಇನ್ನೂ ಮುಂದೆ ದಾಖಲಾಗುವ ಎಲ್ಲಾ ಪ್ರಕರಣಗಳಲ್ಲಿನ ನೊಂದ ಸಂತ್ರಸ್ಥರಿಗೆ ನಿಗಧಿತ ಅವಧಿಯೊಳಗೆ ಜಾತಿ ಪ್ರಮಾಣ ಪತ್ರ ಹಾಗೂ ಪರಿಹಾರವನ್ನು ಒದಗಿಸಬೇಕು ಈ ಬಗ್ಗೆ ಕಾಲ ಕಾಲಕ್ಕೆ ಆಯಾ ಆಯಾ ತಾಲ್ಲೂಕು ದಂಡಾಧಿಕಾರಿಗಳು ಸಭೆಗಳನ್ನು ಕರೆದು ಅದಷ್ಟು ಅಲ್ಲಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ತಾಲ್ಲೂಕು ಮಟ್ಟದಲ್ಲಿ ಚರ್ಚೆಯಾಗಿ ಬಗೆಹರಿಯದೆ ಇರುವ ಸಮಸ್ಯೆಗಳನ್ನು ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ ಬಗೆಹರಿಸಲಾಗುವುದು ಎಂದ ಅವರು ನ್ಯಾಯಾಲಯದಲ್ಲಿರುವ ಪ್ರಕರಣಗಳ ಮಾಹಿತಿ ಪಡೆದು ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿ ಸಂತ್ರಸ್ಥರಿಗೆ ಶೀಘ್ರವಾಗಿ ನ್ಯಾಯ ದೊರಕುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬಹುತೇಕ ಸಿವಿಲ್ ವ್ಯಾಜೆಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಅವುಗಳಿಗೆ ಸರಿಯಾದ ದಾಖಲಾತಿಗಳನ್ನು ಒದಗಿಸಬೇಕು ಹಾಗೂ ಕೆಲ ಅರಣ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ಇದ್ದು, ಅವುಗಳ ಪರಿಹಾರಕ್ಕೆ ಕೇಂದ್ರ ಕಛೇರಿಗಳಿಗೆ ಪತ್ರ ವ್ಯವಹಾರ ಮಾಡಿ ಬಗೆಹರಿಸಿಕೊಳ್ಳುವಂತೆ ಹಾಗೂ ಗಿರಿಜನರಿಗೆ ಸಕಾಲಕ್ಕೆ ಸರ್ಕಾರದಿಂದ ಉಪಯೋಗ ಆಗುವ ಎಲ್ಲಾ ಸೌಲಭ್ಯಗಳು ಸಕಾಲಕ್ಕೆ ಸಿಗುವಂತೆ ಗಂಗಾ ಕಲ್ಯಾಣ ಬೋರ್ ವೆಲ್ ಕೊರೆಸುವುದು ತಡವಾಗಿದೆ ಎಂದು ಸದಸ್ಯರ ಗಮನಕ್ಕೆ ತಂದಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡುವಂತೆ ಹೇಳಿದರು.
ಹಲವು ಕಡೆ ನಿವೇಶನ ಮತ್ತು ಸ್ಮಶಾನಕ್ಕೆ ಜಮೀನು ನೀಡುವಂತೆ ಕೇಳಲಾಗಿದೆ. ಅದಕ್ಕೆ ಸರ್ಕಾರದ ಗಮನಕ್ಕೆ ತಂದು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚೈತ್ರಾ ಶಿವನಾಂದ್ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರೇತರ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
Speedy justice for atrocity cases