ಚಿಕ್ಕಮಗಳೂರು: ರಾಷ್ಟ್ರದ ಅತ್ಯುನ್ನತ ಜ್ಞಾನಪೀಠಪ್ರಶಸ್ತಿ ವಿಜೇತ ಕವಿ ಶಿವರಾಮ ಕಾರಂತರು ಒಬ್ಬ ಕಲಾತಪಸ್ವಿ ಹಾಗೂ ಉತ್ತಮ ಪರಿಸರವಾದಿಯಾಗಿದ್ದರು. ಜೊತೆಗೆ ಪರಿಸರಕ್ಕೆ ತೊಂದರೆಯಾದಲ್ಲಿ ಯಾರೊಂದಿಗೂ ರಾಜೀ ಮಾಡಿಕೊಳ್ಳುತ್ತಿರಲಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಜಗದೀಶಪ್ಪ ಹೇಳಿದರು.
ಕಲ್ಯಾಣಗರದ ಅರಿವಿನಮನೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸೋಮವಾರ ಸಂಜೆ ನಡೆದ ದತ್ತಿ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡದ ಕೋಟಾದಲ್ಲಿ ಜನಿಸಿದ ಶಿವರಾಮ ಕಾರಂತರು ೯೫ ವರ್ಷಗಳ ತುಂಬು ಜೀವನ ನಡೆಸಿದ್ದರು. ೪೭ ಕಾದಂಬರಿಗಳು ಸೇರಿದಂತೆ ಸುಮಾರು ೪೦೦ ಕೃತಿಗಳನ್ನು ರಚಿಸಿ ಕನ್ನಡ ಭಾಷೆಗೆ ಅವರದೇ ಆದ ಕೊಡುಗೆ ನೀಡಿದ್ದರು. ಯಕ್ಷಗಾನ ಕಲೆಗೆ ಅವರ ಕೊಡುಗೆ ಅನನ್ಯ. ಏಷ್ಯಾ ಖಂಡದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಕ್ಕಳ ಆಟಿಕೆ ರೈಲನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ಬದುಕು, ಬರಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಸಂಘದ ಚಟುವಟಿಕೆ ಗಳ ಚಿತ್ರಣ ನೀಡಿದರು ಹಾಗೂ ಶಿವರಾಮ ಕಾರಂತರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ.ಮಲ್ಲೇಶಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಬಿಸಲೇ ಹಳ್ಳಿ ಸೋಮಶೇಖರ್, ನಿವೃತ ಶಿಕ್ಷಕ ಹೆಚ್.ಎಸ್.ಮಂಜುನಾಥ್ ಮತ್ತಿತರರು ಹಾಜರಿದ್ದರು.
Shivaram Karantaru Kalatapasvi