ಮೂಡಿಗೆರೆ: ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಕೇಂದ್ರ ಸಚಿವ ಸದಾನಂದಗೌಡ ಆಗಮಿಸಿದ್ದ ಸಂದರ್ಭದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಅತೃಪ್ತರ ಬಣದ ಗಲಭೆಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಸಮಧಾನಪಟ್ಟು ಕಾರಿನಿಂದ ಕೆಳಗಿಳಿಯದೇ ಚಿಕ್ಕಮಗಳೂರು ಕಡೆಗೆ ತೆರಳಿದರು.
ಮಾಜಿ ಮುಖ್ಯಮಂತ್ರಿ ಕಾರಿನಲ್ಲಿ ಇಳಿಯುವ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಫೋಟೊ ಇರುವ ನಾಮಪಲಕ ಮೇಲಕ್ಕೆತ್ತಿ ಎಂಪಿಕೆ ಪರವಾಗಿ ಜೈಕಾರ ಹಾಕಲಾರಂಭಿಸಿದರು. ಪಕ್ಕದಲ್ಲಿದ್ದ ಅತೃಪ್ತ ಬಣದವರು ಬಿಜೆಪಿ ಬಚಾವೋ ಕುಮಾರಸ್ವಾಮಿ ಹಠಾವೋ ಎಂಬ ನಾಮಪಲಕ ಮೇಲೆತ್ತಿ ದಿಕ್ಕಾರ ಎಂಪಿಕೆ ವಿರುದ್ಧ ದಿಕ್ಕಾರ ಕೂಗಿದರು. ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು. ಕೂಡಲೇ ಪೊಲೀಸರು ಗಲಭೆ ತಪ್ಪಿಸಿದರು. ಇದನ್ನು ಗಮನಿಸಿದ ಬಿ.ಎಸ್.ಯಡಿಯೂರಪ್ಪ ಅವರು ಮುನಿಸಿಕೊಂಡು ಕಾರಿನಿಂದ ಕೆಳಗಿಳಿಯದೇ ವಿಜಯ ಸಂಕಲ್ಪ ಕಾರ್ಯಕ್ರಮಕ್ಕೆ ಭಾಗವಹಿಸದೇ ಸ್ಥಳದಿಂದ ಕಾಲ್ಕಿತ್ತರು. .
ನಂತರ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಲಾರಿಯನ್ನೇರಿ, ಹಿರಿಯ ನಾಯಕರು ಯಾರಿಗೆ ಟಿಕೇಟ್ ನೀಡುತ್ತಾರೋ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದು ಒಳ್ಳೆಯ ಬೆಳವಣಿಗೆಯಲ್ಲ. ಜೈಕಾರ ಕೇವಲ ಭಾರತ ಮಾತೆಗೆ, ಬಿಜೆಪಿ ಪಕ್ಷಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ಮಾಡಿ ಎಂದು ಕಾರ್ಯಕರ್ತರ ಕೈಯಲ್ಲಿದ್ದ ನಾಮಪಲಕವನ್ನು ಪಡೆದುಕೊಂಡರು. ಬಳಿಕ ಕಾರ್ಯರ್ಕರು ತಿಳಿಯಾಗಿದ್ದಾರೆಂದು ಎಂ.ಕೆ.ಪ್ರಾಣೇಶ್ ಅವರು ಚಿಕ್ಕಮಗಳೂರು ಕಡೆಗೆ ತೆರಳಿದರು. ನಂತರ ಮತ್ತೆ ನಾಮಪಲಕವನ್ನು ಎತ್ತಿಕೊಂಡು ಎರಡೂ ಬಣದವರು ಪರ ವಿರೋಧ ದಿಕ್ಕಾರ ಹಾಕುತ್ತಾ ಬಸ್ ನಿಲ್ದಾಣದ ಕಡೆ ತೆರಳಿದರು.
ಎಂಪಿಕೆ ಬಣ ಬಸ್ ನಿಲ್ದಾಣದ ವೃತ್ತಕ್ಕೆ ತೆರಳಿದರೆ, ಪಕ್ಕದಲ್ಲಿರುವ ಪ್ರವಾಸಿ ಮಂದಿರಕ್ಕೆ ಅತೃಪ್ತರ ಬಣ ಸೇರಿಕೊಂಡಿತು. ಒಂದು ಕಡೆ ಎಂಪಿಕೆ ಬಣದಿಂದ ಕಾರ್ಯಕರ್ತರ ಸಭೆ ನಡೆದರೆ, ಇನ್ನೊಂದು ಕಡೆ ಅತೃಪ್ತರಿಂದ ಸಭೆ ನಡೆಸಲಾರಂಭಿಸಿದರು. ಪೊಲೀಸರು ಎರಡೂ ಬಣದ ನಡುವೆ ನಿಂತು ಗಲಭೆ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಿದ್ದರು. ಬಳಿಕ ಎಂ.ಪಿ.ಕುಮಾರಸ್ವಾಮಿ ಅವರು ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರ ನಡೆಸಿದರು. ಬಿಜೆಪಿಯ ಒಳ ಜಗಳ ಬೀದಿಗೆ ಬಂದ ದೃಶ್ಯ ಕಂಡು ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರ ನೆಗೆಪಾಟಿಕೆಗೆ ಕಾರಣವಾಯಿತು.
Clash between 2 factions of BJP in Mudigere