ಮೂಡಿಗೆರೆ: ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೇಟ್ ನೀಡಬಾರದು. ಹೊಸಬರಿಗೆ ಅವಕಾಶ ನೀಡಬೇಕೆಂದು ಈ ಹಿಂದೆ ಪ್ರತಿ ಹೋಬಳಿ ಮಟ್ಟದಲ್ಲಿ ಕೆಲವೆಡೆ ಬಿಜೆಪಿಯ ಅತೃಪ್ತರಿಂದ ಗುಪ್ತ ಸಭೆ ನಡೆದಿದ್ದವು. ಆದರೆ ಗುರುವಾರ ಪಟ್ಟಣದ ಪ್ರೀತಮ್ ಕಲ್ಯಾಣ ಮಂಟಪದಲ್ಲಿ ಅತೃಪ್ತರಿಂದ ಬಿಜೆಪಿ ಬಚಾವೋ ಕುಮಾರಸ್ವಾಮಿ ಹಠಾವೋ ಎಂಬ ನಾಮಫಲಕವನ್ನು ಹಿಡಿದು ಘೋಷಣೆ ಕೂಗುವ ಮೂಲಕ ಭಹಿರಂಗವಾಗಿಯೇ ಹಾಲಿ ಶಾಸಕರಿಗೆ ಟಿಕೇಟ್ ನೀಡಬಾರದೆಂದು ಸಭೆ ನಡೆಸಿದರು.
ಸಭೆಯಲ್ಲಿ ಶಾಸಕರು ಸರಕಾರದಿಂದ ಬಂದ ಅನುದಾನವನ್ನು ಮಹಾಶಕ್ತಿ ಕೇಂದ್ರದ ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಜನರ ತೆರಿಗೆ ಹಣವನ್ನು ಸರಕಾರ ಅನುದಾನದ ರೀತಿಯಲ್ಲಿ ಕ್ಷೇತ್ರಕ್ಕೆ ನೀಡಿದರೆ, ತನ್ನ ಜೇಬಿನಿಂದಲೇ ಹಣ ಕೊಟ್ಟ ರೀತಿಯಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಬಿಜೆಪಿ ಸರಕಾರದ ಅನುದಾನ ಬೇಕು. ಅವರನ್ನು ಗೆಲ್ಲಿಸಿದ ಕಾರ್ಯಕರ್ತರು ಮಾತ್ರ ಬೇಡವೆಂದ ಮೇಲೆ ನಮಗೂ ಶಾಸಕರ ಅವಶ್ಯಕತೆಯಿಲ್ಲ. ಗ್ರಾ.ಪಂ, ತಾ.ಪಂ. ಜಿ.ಪಂ. ಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ. ಅಲ್ಲದೆ ಎಂಎಲ್ಸಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಎಂಪಿಕೆ ನಮಗೆ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಶಾಸಕರು ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದಾರೆಂದು ೨೦೧೩ರಲ್ಲಿ ಎಂಪಿಕೆ ಅವರಿಗೆ ಪಕ್ಷದಿಂದ ಟಿಕೇಟ್ ನೀಡಬಾರದೆಂದು ರಾಜ್ಯದ ನಾಯಕರ ಗಮನಕ್ಕೆ ಸೆಳೆದಿದ್ದರೂ ಎಂಪಿಕೆಗೆ ಟಿಕೇಟ್ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಯಕರ್ತರೆಲ್ಲರೂ ಒಗ್ಗೂಡಿಕೊಂಡು ಅಂದೇ ಅವರನ್ನು ಸೋಲಿಸಿದ್ದೆವು. ಇದರಿಂದ ಎಂಪಿಕೆ ಅವರು ಇನ್ನು ಮುಂದೆ ಎಲ್ಲರ ವಿಶ್ವಾಸ ಪಡೆದು ಆಡಳಿತ ನಡೆಸುತ್ತೇನೆಂದು ಭರವಸೆ ನೀಡಿದ ಮೇಲೆ ಮತ್ತೊಂದು ಬಾರಿ ೨೦೧೮ರಲ್ಲಿ ಗೆಲ್ಲಿಸಿದ್ದೆವು. ಗೆದ್ದ ಬಳಿಕ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಫಾರಂ ೫೩ಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಂದಲೇ ಲಂಚ ಪಡೆದು ಕೆಲಸ ಮಾಡಿಕೊಟ್ಟಿಲ್ಲವೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಶಾಸಕರು ಪಕ್ಷದ ಕಚೇರಿಗೆ ಬರುವುದಿಲ್ಲ. ಸರಕಾರದ ಅನುದಾನವನ್ನು ತನ್ನ ಮನೆಯನ್ನೇ ವಿತರಿಸುತ್ತಿದ್ದಾರೆ. ಮನೆಗೆ ಹೋದರೆ ಮೊದಲು ಗುತ್ತಿಗೆದಾರರನ್ನು ಬಿಟ್ಟರೆ ಕಾರ್ಯಕರ್ತರನ್ನು ಮಾತನಾಡಿಸುವುದೇ ಇಲ್ಲ. ಅವರನ್ನು ಮತ್ತೆ ಗೆಲ್ಲಿಸಿದರೆ ೫ ವರ್ಷ ಪುನಃ ಕಾರ್ಯಕರ್ತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಬಿಜೆಪಿ ಕಾರ್ಯಕರ್ತರನ್ನು ಮುಳುಗಿಸಿ ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಮುಳುಗಿಸಲು ಅವರ ಬಾಗಿಲು ತಟ್ಟಲು ಮುಂದಾಗಿದ್ದಾರೆ. ಎಂಪಿಕೆ ಬಿಜೆಪಿಯ ಹಿರಿಯ ನಾಯಕರನ್ನೇ ಬಿಟ್ಟಿಲ್ಲ. ಇನ್ನು ನಮ್ಮನ್ನು ಬಿಡುವರೇ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ನವರು ಎಂಪಿಕೆ ಅವರನ್ನು ಹತ್ತಿರ ಬಿಟ್ಟುಕೊಂಡಿಲ್ಲ. ಈಗ ಮತ್ತೊಂದು ಅವಕಾಶ ಕೊಡುವುದು ಬೇಡ. ಹೊಸಬರಿಗೆ ಟಿಕೇಟ್ ನೀಡದಿದ್ದರೆ ಎಂಪಿಕೆ ಅವರನ್ನು ಸೋಲಿಸಬೇಕೆಂದು ಸಂಕಲ್ಪ ಮಾಡಿದರು.
ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್, ಆಲ್ದೂರು ಮಂಡಳದ ಶಾಂತೇಗೌಡ, ಒಬಿಸಿ ಮೋರ್ಚಾದ ತಾಲೂಕು ಅಧ್ಯಕ್ಷ ಯೋಗೇಶ್ ಪೂಜಾರಿ, ಗಜೇಂದ್ರ ಕೊಟ್ಟಿಗೆಹಾರ, ಪ.ಪಂ. ಸದಸ್ಯ ಅನುಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್, ಮಾಜಿ ಉಪಾಧ್ಯಕ್ಷ ದೇವರಾಜು, ಸುಧಾಕರ್ ಹಳ್ಳಿಬೈಲ್, ಸಂಪತ್ ಹೆಡ್ದಾಳ್, ಸುಮಂತ್ ವಸ್ತಾರೆ, ಟಿಕೇಟ್ ಆಕಾಂಕ್ಷಿಗಳಾದ ದೀಪಕ್ ದೊಡ್ಡಯ್ಯ, ಎಂ.ಎಸ್.ಸುಜಿತ್, ಜೈಪಾಲ್, ಅಭಿಪಾಷ್, ಗಜೇಶ್ ಗೋಣಿಬೀಡು ಮತ್ತಿತರರಿದ್ದರು.
Insist that tickets should be given to newcomers