ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ – ೨೦೨೩ ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಅಭ್ಯರ್ಥಿಗಳ ಕರಪತ್ರ, ಪೋಸ್ಟರ್ಸ್ ಮತ್ತು ಬ್ಯಾನರ್ಗಳನ್ನು ಮುದ್ರಿಸುವ ಮೊದಲು ಆಯಾ ವಿಧಾನಸಭಾ ಮತ ಕ್ಷೇತ್ರಗಳ ಚುನಾವಣಾಧಿಕಾರಿ (ಆರ್ ಒ) ಅವರ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮುದ್ರಣ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮು ಗಲಭೆ ಸೃಷ್ಠಿಸುವಂತಹ ಕರಪತ್ರ ಪೋಸ್ಟರ್ ಮತ್ತು ಬ್ಯಾನರ್ಗಳನ್ನು ಮುದ್ರಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು .
ಮುದ್ರಕರು ಪಾಂಪ್ಲೇಟ್ಗಳು ಮತ್ತು ಪೋಸ್ಟರ್ಗಳನ್ನು ಮುದ್ರಿಸುವ ಮೊದಲು ಪ್ರಕಾಶನದ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ಪಡೆದಿರಬೇಕು. ಗುರುತಿನ ದೃಢೀಕರಣವಿಲ್ಲದೇ ಮುದ್ರಣ ಮಾಡಬಾರದು. ತಾವು ಮುದ್ರಿಸುವ ಒಂದು ಪ್ರತಿಯ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಪ್ರಿಟಿಂಗ್ ಪ್ರೆಸ್ ಮಾಲೀಕರು ಆರ್ ಒಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅರ್ಭ್ಯರ್ಥಿಗಳ ಭಾವಚಿತ್ರ ಹಾಕಬಾರದು ಎಂದು ಸೂಚಿಸಿದರು.
ಪ್ರತಿ ಪುಟದ ಮುದ್ರಣಕ್ಕೆ ಈಗಾಗಲೇ ಹಣ ನಿಗಧಿಪಡಿಸಲಾಗಿದೆ. ಕರಪತ್ರ, ಪೋಸ್ಟರ್, ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು ಪ್ರಕಾಶಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಯನುಸಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ ಅನ್ವಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಚುನಾವಣೆ ಬಹಿಷ್ಕಾರದಂತಹ ಪೋಸ್ಟರ್, ಕರಪತ್ರ ಮತ್ತು ಬ್ಯಾನರ್ ಮುದ್ರಿಸುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ನೋಡಲ್ ಅಧಿಕಾರಿ ಶಿವಪ್ರಕಾಶ್ ಭಟ್, ವಾರ್ತಾಧಿಕಾರಿ ಮಂಜೇಗೌಡ ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಜರಿದ್ದರು.
RO permission is mandatory for printing posters