ಚಿಕ್ಕಮಗಳೂರು: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ನಾಲ್ಕನೇ ದಿನವಾದ ಮಂಗಳವಾರದಂದು ಜಿಲ್ಲೆಯಲ್ಲಿ ೧೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕರುಗಳಾದ ಕಡೂರಿನ ವೈಎಸ್ವಿ ದತ್ತ, ತರೀಕೆರೆಯ ಜಿ.ಎಚ್. ಶ್ರೀನಿವಾಸ್ ಸೇರಿದಂತೆ ೧೬ ಮಂದಿ ಒಟ್ಟು ೧೮ ನಾಮಪತ್ರಗಳು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ನಾಲ್ಕು ದಿನಗಳು ಕಳೆದಿದ್ದು, ಏ.೨೦ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹಾಗಾಗಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ.ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಟಿ.ಡಿ. ರಾಜೇಗೌಡ ಅವರು ಕೊಪ್ಪ ಪಟ್ಟಣದ ಅರಳಿಕಟ್ಟೆ ಶ್ರೀ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆದ ಗಣ ಹೋಮದಲ್ಲಿ ಭಾಗವಹಿಸಿ ನಂತರ, ನಿತ್ಯಧಾರ ಮಾತೆಯ ಚರ್ಚ್, ಜಮಿಯಾ ಮಸೀದಿ, ಶ್ರೀ ಗಣೇಶ ದುರ್ಗಾ ದೇವಸ್ಥಾನ, ಮೊಹಿಯಿದ್ದೀನ್ ಶಾಫಿ ಜಮಿಮಾ ಮಸೀದಿ ಹಾಗೂ ಬಾಳಗಡಿಯ ಸಿಎಸ್ಐ ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಧರ್ಮಗುರುಗಳ ಮತ್ತು ಪಕ್ಷದ ಹಿರಿಯ ಮುಖಂಡರ ಅಶೀರ್ವಾದ ಪಡೆದು ಚುನಾವಣಾಽಕಾರಿಗಳ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಟಿ.ಆರ್. ವೇದಮೂರ್ತಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
ಅಲ್ಪಾವಧಿಯಲ್ಲಿ ಜೆಡಿಎಸ್ನಿಂದ ಕಾಂಗ್ರೆಸ್ಗೆ ತೆರಳಿ ಮರಳಿ ಜೆಡಿಎಸ್ಗೆ ಆಗಮಿಸಿದ ವೈಎಸ್ವಿ ದತ್ತ ಅವರು ತಮ್ಮ ರಾಜಕೀಯ ಗುರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಉಪಸ್ಥಿತಿಯಲ್ಲಿ ಮಂಗಳವಾರ ಕಡೂರು ಚುನಾವಣಾಧಿಕಾರಿ ತಿರುಮಲೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ಮೊದಲು ದತ್ತ ಅವರು ತಮ್ಮ ಹುಟ್ಟೂರಿನಲ್ಲಿ ಯಗಟಿಯಲ್ಲಿ ಅರೆಕಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಡೂರು ಪಟ್ಟಣದ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಇಲ್ಲಿನ ಎಪಿಎಂಸಿ ಆವರಣದಿಂದ ಎತ್ತಿನ ಗಾಡಿ ಮೆರವಣಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದವರಿಗೆ ಸಾಗಿದರು. ಇದರಲ್ಲಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಇದೇ ವೇಳೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ನಲ್ಲಿ ಕಡೂರಿಗೆ ಆಗಮಿಸಿ, ಅಲ್ಲಿಂದ ತಾಲೂಕು ಕಚೇರಿಗೆ ತೆರಳಿದರು.
ವೈಎಸ್ವಿ ದತ್ತ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವವರೆಗೆ ದೇವೇಗೌಡರು ಚುನಾವಣಾಧಿಕಾರಿಗಳ ಕಚೇರಿಯಲ್ಲಿಯೇ ಆಸಿನರಾಗಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ, ಬಿದರೆ ಜಗದೀಶ್, ಮಹೇಶ್ವರಪ್ಪ ಹಾಜರಿದ್ದರು. ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಎದ್ದಿರುವ ಗೋಪಿಕೃಷ್ಣ ಅವರು ನಿರೀಕ್ಷೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದೇ ದಿನ ಕಾಂಗ್ರೆಸ್ ಪಕ್ಷದ ಅಽಕೃತ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಕೂಡ ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು.
ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅವರು ಮಂಗಳವಾರವೂ ಕೂಡ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಹಾಜರಿದ್ದರು. ನಾಮಪತ್ರ ಸಲ್ಲಿಕೆಗೆ ಇನ್ನು ಎರಡೇ ದಿನ ಬಾಕಿ ಇದ್ದು, ಈ ದಿನಗಳಂದು ಹೆಚ್ಚು ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಹೆಚ್ಚಿದೆ.
18 nomination papers were submitted in the district