ಕೊಪ್ಪ: ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಟಿ.ಡಿ.ರಾಜೇಗೌಡ ಅವರು ಮಂಗಳವಾರ ತಾಲ್ಲೂಕು ಆಡಳಿತ ಸೌಧದಲ್ಲಿ ಕ್ಷೇತ್ರ ಚುನಾವಣಾಧಿಕಾರಿ ಟಿ.ಆರ್.ವೇದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್ ವಿಮಲ ಸುಪ್ರಿಯಾ ಇದ್ದರು.
ನಾಮಪತ್ರ ಸಲ್ಲಿಸುವ ಮುನ್ನಅರಳಿಕಟ್ಟೆ ಶಕ್ತಿಗಣಪತಿ ದೇವಸ್ಥಾನದಲ್ಲಿ ಗಣಹೋಮ ನಡೆಯಿತು. ಮಾರ್ಕೆಟ್ ರಸ್ತೆಯಲ್ಲಿನ ದುರ್ಗಾ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿದರು. ನಿತ್ಯಾಧಾರ ಮಾತೆ ದೇವಾಲಯ (ಚರ್ಚ್), ಸ್ಥಳೀಯ ಮಸೀದಿ, ಜೈನ ಬಸದಿಗೆ ತೆರಳಿ ಧರ್ಮಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಸೋಮವಾರ ಕೋಪದ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಸಲು ತಾಲ್ಲೂಕು ಆಡಳಿತ ಸೌಧದತ್ತ ತೆರಳಿದಾಗ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು, ರಾಜೇಗೌಡ ಅವರ ಅಭಿಮಾನಿಗಳು ‘ಜೈ ಟಿ.ಡಿ.ಆರ್’ ಹಾಗೂ ‘ಶೃಂಗೇರಿ ಕ್ಷೇತ್ರಕ್ಕೆ ಮತ್ತೊಮ್ಮೆ ಟಿ.ಡಿ.ಆರ್’ ಎಂಬ ಘೋಷಣೆ ಕೂಗಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್, ಕ್ಷೇತ್ರ ಚುನಾವಣಾ ಉಸ್ತುವಾರಿ ಸಮಿತಿ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಮುಖಂಡರಾದ ಆದಿಲ್ ಶಾ, ಎಸ್.ಪೇಟೆ ಸತೀಶ್ ಇದ್ದರು.
MLA T.D. Rajegowda submitted nomination papers as Congress candidate