ಕಳಸ: ‘ಮೂಡಿಗೆರೆ ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ಕಳೆದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಮಟ್ಟ ಹಾಕಲು ಮೊದಲ ಆದ್ಯತೆ ನೀಡುತ್ತೇನೆ’ ಎಂದು ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಹೇಳಿದರು.
ತಾಲ್ಲೂಕಿನ ಎಲ್ಲ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ, ಬೂತ್ ಅಧ್ಯಕ್ಷರ ಭೇಟಿ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.
‘ಪಕ್ಷಕ್ಕೆ ಸದಾ ಮುಜುಗರ ತರುತ್ತಿದ್ದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪಕ್ಷ ಬಿಟ್ಟಿದ್ದು ಅನುಕೂಲವೇ ಆಗಿದೆ. ಪಕ್ಷದಿಂದ ದೂರವಿದ್ದ ಅನೇಕ ಮುಖಂಡರು ಈಗ ಮತ್ತೆ ಉತ್ಸಾಹದಿಂದ ಪಕ್ಷಕ್ಕೆ ಮರಳಿದ್ದಾರೆ. ಹೊಸ, ಪ್ರಾಮಾಣಿಕ ಅಭ್ಯರ್ಥಿ ಬೇಕು ಎಂಬ ಅವರೆಲ್ಲರ ಆಶಯಕ್ಕೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ’ ಎಂದು ದೀಪಕ್ ದೊಡ್ಡಯ್ಯ ಹೇಳಿದರು.
‘ಮೂಡಿಗರೆ ಕ್ಷೇತ್ರದ ಅಭಿವೃದ್ಧಿ ಕಲ್ಪನೆ ಸ್ಪಷ್ಟವಾಗಿದೆ.ಕಳಸ, ಹೊರನಾಡು ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತೇನೆ. ಕುದುರೆಮುಖದಲ್ಲಿ ವಿಶೇಷ ಕಾರ್ಯಯೋಜನೆ ಕೈಗೊಂಡು ಸ್ಥಳೀಯ ಆರ್ಥಿಕತೆ, ಉದ್ಯೋಗಕ್ಕೆ ನೆರವು ನೀಡುತ್ತೇನೆ’ ಎಂದರು.
‘ಕಳಸ ತಾಲ್ಲೂಕು ಕೇಂದ್ರವು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಅನುಕೂಲ ಆಗುವಂತೆ ಬಾಡಿಗೆ ಕಟ್ಟಡಗಳಲ್ಲಿ ಎಲ್ಲ ಕಚೇರಿ ಆರಂಭವಾಗಬೇಕು. ಇನಾಂ ಭೂಮಿ ಸಮಸ್ಯೆ ಪರಿಹಾರ ಆಗಬೇಕು. ಇದರ ಬಗ್ಗೆ ಕೆಲಸ ಮಾಡುತ್ತೇನೆ’ ಎಂದು ದೀಪಕ್ ಹೇಳಿದರು.
ಕಂದಾಯ ಇಲಾಖೆಯಲ್ಲಿ ಬಾಕಿ ಇರುವ 94 ಸಿ, ಫಾರಂ ನಂಬರ್ 53 ಮತ್ತು 57 ಅರ್ಜಿಗಳ ವಿಲೇವಾರಿಗೆ ಪ್ರಯತ್ನಿಸುತ್ತೇನೆ. ಎಲ್ಲ ಇಲಾಖೆಗಳ ಭ್ರಷ್ಟ ಅಧಿಕಾರಿಗಳ ಎತ್ತಂಗಡಿ ಆಗುತ್ತದೆ. ರಸ್ತೆ ಮತ್ತಿತರ ಕಾಮಗಾರಿಗಳು ಗುಣಮಟ್ಟದಿಂದ ನಡೆಯುವಂತೆ ನಿಗಾ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ‘ಕಳೆದ ಅವಧಿಯಲ್ಲಿ ನಮಗೆ ಶಾಸಕರ ಅಸಹಕಾರದಿಂದ ಅಭಿವೃದ್ಧಿಗೆ ವಿಪರೀತ ತೊಡಕು ಆಗಿತ್ತು. ದೀಪಕ್ ದೊಡ್ಡಯ್ಯ ಸದಾ ಜನರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿರುವುದು ಸಂತಸ’ ಎಂದರು.
ನಾಗಭೂಷಣ, ನಾಗೇಶ್ ಭಟ್, ಶ್ರೀಕಾಂತ್, ಕಾರ್ತಿಕ್ ಶಾಸ್ತ್ರಿ, ರಂಗನಾಥ್, ಕೃಷ್ಣಪ್ಪ, ಮಹೇಶ್, ಸುಜಯಾ, ನಾಗರತ್ನಾ ಇದ್ದರು.
The first priority is to level corruption