ಕಡೂರು: ಕಡೂರು ಸಿ.ನಂಜಪ್ಪ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಬುಧವಾರ ಎರಡು ನಾಮಪತ್ರ ಸಲ್ಲಿಸಿದರು.
ಬುಧವಾರ ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಡಾ.ತಿರುಮಲೇಶ್ ಅವರಿಗೆ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ೫೦ ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಕೆಪಿಸಿಸಿ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿರುವೆ ಆದರೂ ತಮ್ಮ ಹಿರಿತನಕ್ಕೆ ಗೌರವ ನೀಡದೆ ಕಳೆದ ಬಾರಿ ಪರಾಭವಗೊಂಡ ಅಭ್ಯರ್ಥಿಗೇ ಮತ್ತೆ ಟಿಕೆಟ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದ ತಾವು ಕಡೂರು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಹಿಂದಿನಿಂದ ಮಾಡಿದ್ದೇನೆ. ಈ ಬಾರಿ ನಾನು ಕಡೂರು ಕ್ಷೇತ್ರದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೆ. ಕಳೆದ ಬಾರಿ ಸಿ.ಎಂ. ಧನಂಜಯ ಅವರು ಕಣದಿಂದ ಹಿಂದೆ ಸರಿದು ಕೆ.ಎಸ್. ಆನಂದ್ ಅವರಿಗೆ ಬೆಂಬಲಿಸುವಂತೆ ಮಾಡುವಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು. ಈ ಬಾರಿ ನನಗೆ ಅವಕಾಶ ಮಾಡಿಕೊಡದೆ ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಮೋಸ ಮಾಡಿದ್ದಾರೆಂದೇ ನನ್ನ ಭಾವನೆಯಾಗಿದೆ. ಮೂಲ ಕಾಂಗ್ರೆಸ್ಸಿಗರಿಗೆ ಗೌರವ ನೀಡುವುದನ್ನು ಕಾಂಗ್ರೆಸ್ ಮರೆತಿದೆ ಎಂದು ವಿಷಾಧಿಸಿದರು.
ಏಳು ಜನ ಆಕಾಂಕ್ಷಿಗಳಿದ್ದರೂ ಕಳೆದ ಬಾರಿ ಸೋತವರಿಗೆ ಮತ್ತೆ ಅವಕಾಶ ನೀಡುವ ಉದ್ದೇಶವೇನಿತ್ತು? ಹಿರಿತನ, ಅನುಭವ ಇವುಗಳಿಗೆ ಬೆಲೆಯೇ ಇಲ್ಲವೆ? ಹಾಗಾಗಿ ಕಾಂಗ್ರೆಸ್ ಪಕ್ಷದಿಂದ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಈಗಲೂ ಕಾಲ ಮಿಂಚಿಲ್ಲ. ಪಕ್ಷದ ವರಿಷ್ಟರು ನಮ್ಮ ಭಾವನೆಗಳನ್ನು ಗೌರವಿಸಿ ಅವಕಾಶ ಮಾಡಿಕೊಡಲಿ. ಇಲ್ಲದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡುವುದು ಖಚಿತ ಎಂದರು.
Kaduru C. Nanjappa submission of nomination paper as Tantra candidate