ಕಡೂರು : ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಆನಂದ್ ಗುರುವಾರ ಭಾರೀ ಜನಸ್ತೋಮದ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಹೊರಟು ಚುನಾವಣಾಧಿಕಾರಿ ಕಚೇರಿಗೆ ತೆರಳುವ ಮುನ್ನ ಕದಂಬ ವೃತ್ತದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಆನಂದ್, ಕಡೂರಿನಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆಯೆಂಬುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ. ಭ್ರಷ್ಟಾಚಾರದಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಯಾವುದೇ ರೀತಿಯ ಜನಪರ ಅಥವಾ ಗುರುತರ ಕಾರ್ಯಗಳಾಗಿಲ್ಲ. ತಾಲ್ಲೂಕಿನ ಆಡಳಿತ ಹದಗೆಟ್ಟು ಹೋಗಿದೆ. ಪ್ರಸ್ತುತ ಬಡವರ,ರೈತರ ಪರ ಧ್ವನಿ ಎತ್ತುವವರು ಬೇಕಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ ಪಕ್ಷವನ್ನು ಸೋಲಲು ಬಿಡದೆ ಜನಪರ ಹೋರಾಟ ಮತ್ತು ಪಕ್ಷ ಸಂಘಟನೆಯತ್ತ ಗಮನ ಹರಿಸಿದೆ ಎಂದರು.
ಕ್ಷೇತ್ರದಲ್ಲಿ ಪಕ್ಷ ಸುಭಧ್ರವಾಗಿದೆ. ಇದರಿಂದಾಗಿಯೇ ಪಕ್ಷ ಎರಡನೇ ಬಾರಿ ಅವಕಾಶ ನೀಡಿದೆ.ಇದು ನಮ್ಮ ಪಾಲಿಗೆ ಮಾಡು-ಮಡಿ ಎಂಬ ಚುನಾವಣೆಯಾಗಿದೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಬೇಕು. ಪಕ್ಷಕ್ಕೆ ಬೇಷರತ್ತಾಗಿ ಸೇರ್ಪಡೆಯಾದವರು ನಮ್ಮಿಂದ ದೂರವಾಗಿ ನೈತಿಕತೆ ಕಳೆದುಕೊಂಡರು.ಅವರ ಬಗ್ಗೆ ಟೀಕೆ ಟಿಪ್ಪಣಿ ಯಾವುದೂ ಬೇಡ. ತಾವು ನೀಡುವ ಒಂದೊಂದು ಮತವೂ ಭ್ರಷ್ಟಾಚಾರದ ವಿರುದ್ಧ ಎಂಬುದನ್ನು ಮರೆಯದೆ ಮತ ಚಲಾಯಿಸಿ ಎಂದು ಕೋರಿದರು.
ಮುಖಂಡ ಬೀರೂರು ದೇವರಾಜ್ ಮಾತನಾಡಿ, ಕ್ಷೇತ್ತದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಚಿಂತನೆ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಸ್. ಆನಂದ್ ಅವರನ್ನು ಆಯ್ಕೆ ಮಾಡಬೇಕೆಂದು ಕೋರಿದರು.
ಮುಖಂಡರಾದ ಶರತ್ ಕೃಷ್ಣಮೂರ್ತಿ, ಕೆ.ಎಂ. ಮೋಹನ್ ಕುಮಾರ್, ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಕೆ.ಎಚ್. ಶಂಕರ್, ಲಿಂಗರಾಜು ರೇವಣ್ಣಯ್ಯ, ಸಿ.ವಿ. ಆನಂದ್ ಇದ್ದರು. ತದನಂತರ ಕೆ.ಎಸ್.ಆನಂದ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಮುಖಂಡರಾದ ಬೀರೂರು ದೇವರಾಜ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಎಂ.ಆರ್.ಟಿ. ಸುರೇಶ್ ಅವರ ಉಪಸ್ಥಿತಿಯಲ್ಲಿ ಚುನಾವಣಾಧಿಕಾರಿ ಡಾ.ಎಂ. ತಿರುಮಲೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
Congress candidate K.S. Anand nomination submission