ಚಿಕ್ಕಮಗಳೂರು: ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಭರಾಟೆ ಮುಗಿದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ರಾಜ್ಯಾದ್ಯಂತ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿರುಸಿನ ಸಿದ್ಧತೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಏ.28ರಿಂದ ಭರ್ಜರಿ ಪ್ರಚಾರ ಆರಂಭಿಸುವುದು ಬಹುತೇಕ ನಿಶ್ಚಿತವಾಗಿದೆ.
ಅಂದರೆ, ಏ.28ರಿಂದ ಮೇ 7ರವರೆಗಿನ ಅವಧಿಯಲ್ಲಿ ಸುಮಾರು ಏಳು ದಿನಗಳ ಕಾಲ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಸುಮಾರು 20ಕ್ಕೂ ಹೆಚ್ಚು ಸಭೆ, ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೋದಿ ಅವರ ಮೊದಲ ಸಭೆ ಎಲ್ಲಿಂದ ಆರಂಭವಾಗಬೇಕು ಎಂಬುದರ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದ್ದು, ಒಂದೆರಡು ದಿನಗಳಲ್ಲಿ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮೊದಲಾದ ಅನೇಕರು ಪಕ್ಷ ತೊರೆದು ಹೋಗಿದ್ದರಿಂದ ಪಕ್ಷಕ್ಕಾಗಬಹುದಾದ ಹಾನಿಯನ್ನು ತಡೆಗಟ್ಟಲು ಮತ್ತು ಪ್ರತಿಪಕ್ಷ ಕಾಂಗ್ರೆಸ್ ಕೂಡ ತೀವ್ರ ಪೈಪೋಟಿ ಒಡ್ಡುತ್ತಿರುವುದರಿಂದ ಮೋದಿ ಅವರನ್ನು ಹೆಚ್ಚು ಹೆಚ್ಚು ಪ್ರಚಾರದಲ್ಲಿ ಬಳಸಿಕೊಳ್ಳಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
Modi 20 convention for 1 week in the state from A.28?