ಚಿಕ್ಕಮಗಳೂರು: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯತನ, ಬೇಜವಾಬ್ದಾರಿತನ ತೋರಿ ಕರ್ತವ್ಯಕ್ಕೆ ಹಾಜರಾಗದೆ ಹಾಗೂ ಮೇಲಾಧಿಕಾರಿಗೆ ಅಸಡ್ಡೆಯಾಗಿ ಉತ್ತರ ನೀಡುವ ಮೂಲಕ ಚುನಾವಣೆ ಕರ್ತವ್ಯಕ್ಕೆ ಲೋಪ ಎಸಗಿದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕಡೂರು ಸಿಡಿಪಿಒ ಶಿವಪ್ರಕಾಶ್ ಅವರನ್ನು ಅಮಾನತ್ತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.
ಕಡೂರಿನ ಸಿಡಿಪಿಒ ಶಿವಪ್ರಕಾಶ್ ಅವರನ್ನು ತರೀಕೆರೆ ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ವೆಚ್ಚದ ಕೇಂದ್ರ ವೀಕ್ಷಕರ ಹೆಚ್ಚುವರಿ ಲೈಸನ್ ಅಧಿಕಾರಿಯಾಗಿ ಏ. ೧೩ ರಂದು ನಿಯೋಜಿಸಲಾಗಿತ್ತು, ಇದರಂತೆ ಕೇಂದ್ರ ವೀಕ್ಷಕರು ಜಿಲ್ಲೆಗೆ ಆಗಮಿಸಿದಾಗ ಲೈಸನ್ ಅಧಿಕಾರಿಯಾದ ವಿನಾಯಕ ಕೆ.ಪಿ., ಸಹಾಯಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ತರೀಕೆರೆ ಇವರ ಜೊತೆಗೆ ಹೆಚ್ಚುವರಿ ಲೈಸನ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಹಾಗೂ ವಿನಾಯಕರವರು ವಿಕಲಚೇತನರಾಗಿರುವ ಕಾರಣ ತರೀಕೆರೆ ಕೇಂದ್ರ ಸ್ಥಾನದಲ್ಲಿದ್ದು, ಕೇಂದ್ರ ವೀಕ್ಷಕರ ಕರ್ತವ್ಯ ನಿರ್ವಹಣೆ ಮಾಡುವಂತೆ ಸೂಚಿಸಿ ಶಿವಪ್ರಕಾಶ್ರನ್ನು ಕೇಂದ್ರ ವೀಕ್ಷಕರ ಲೈಸನ್ ಅಧಿಕಾರಿಯಾಗಿ ಪೂರ್ಣ ಅವಧಿಗೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು.
ಸಿಡಿಪಿಒ ಶಿವಪ್ರಕಾಶ್ ಏ. ೨೦ ರಂದು ಕೇಂದ್ರ ವೀಕ್ಷಕರ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಈ ಕುರಿತು ವೀಕ್ಷಕರಗಳ ಎಲ್ಲಾ ನೋಡೆಲ್ ಅಧಿಕಾರಿ ಅವರು ದೂರವಾಣಿ ಮೂಲಕ ಶಿವಪ್ರಕಾಶ ಅವರನ್ನು ಸಂಪರ್ಕಿಸಿದಾಗ ಕೇಂದ್ರ ವೀಕ್ಷಕರು ಕಡೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ತಾನು ಕ್ಷೇತ್ರ ವೀಕ್ಷಕರ ಜೊತೆ ಕರ್ತವ್ಯ ನಿರ್ವಹಿಸುತ್ತೇನೆಂದು, ತನ್ನ ಕ್ಷೇತ್ರ ಕಡೂರು ತಾಲ್ಲೂಕು ಮಾತ್ರ ಆಗಿರುವುದರಿಂದ ವೀಕ್ಷಕರು ಇತರೆ ಸ್ಥಳಗಳಲ್ಲಿ ಪ್ರವಾಸ ಮಾಡಿದಾಗ ಹೋಗಲು ಸಾಧ್ಯವಿಲ್ಲ ಎಂದು ಮತ್ತು ನನಗೆ ಯಾವುದೇ ರೀತಿಯ ವಾಹನ ಸೌಲಭ್ಯ ಇಲ್ಲದೇ ಇರುವುದರಿಂದ ವೀಕ್ಷಕರ ಜೊತೆ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಈ ವಿಚಾರವನ್ನು ತಾವು ಯಾರಿಗೆ ಬೇಕಾದರೂ ತಿಳಿಸಿ ಎಂದು ಹೇಳುತ್ತಾ ಲೈಸನ್ ಕರ್ತವ್ಯವನ್ನು ಮಾಡುವುದಿಲ್ಲವೆಂದು ಬೇಜವಾಬ್ದಾರಿತನದಲ್ಲಿ ಉತ್ತರ ನೀಡಿರುತ್ತಾರೆ.
ಮೇಲಾಧಿಕಾರಿಗಳಿಗೆ ಅಸಡ್ಡೆಯಾಗಿ ಉತ್ತರ ನೀಡುವ ಮೂಲಕ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆ ಮತ್ತು ಚುನಾವಣಾ ಕರ್ತವ್ಯದ ಗಂಭೀರತೆಯನ್ನು ಅರಿಯದೆ ಚುನಾವಣಾ ನೇಮಕಾತಿ ಆದೇಶವನ್ನು ಪಾಲನೆ ಮಾಡದೆ ನಿರ್ಲಕ್ಷತನ ತೋರುವ ಮೂಲಕ ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ, ಜನತಾ ಪ್ರಾತಿನಿಧ್ಯ ಕಾಯ್ದೆ ೧೯೫೧ ರ ಕಲಂ ೨೮ ಗೆ ಮತ್ತು ೧೩೬ರಡಿ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸದರಿಯವರನ್ನು ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
Suspension of CDPO