ಚಿಕ್ಕಮಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೇಶ ವಿಕಾಸದ ಸಕರಾತ್ಮಕ ಚಿಂತನೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಅಭಿವೃದ್ಧಿ ಕಾರ್ಯಗಳು, ರಾಷ್ಟ್ರಮುಖಿ ಆಲೋಚನೆಗಳನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟ ಆನಂತರದಲ್ಲಿ ನನ್ನ ಹಿತೈಷಿಗಳು, ಮಾರ್ಗದರ್ಶಕರು ಸೇರಿದಂತೆ ಹಿತ ಚಿಂತಕರಲ್ಲಿ ಪಡೆದ ಸಲಹೆ ಮತ್ತು ಮಾರ್ಗದರ್ಶನದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ, ಸಾಂಸ್ಕೃತಿಕ ರಾಷ್ಟ್ರೀಯತೆಯ ಸಿದ್ಧಾಂತದ ಮೂಲಕ ರಾಷ್ಟ್ರ ಮೊದಲು ಎಂಬ ತತ್ವದೊಂದಿಗೆ ಮುನ್ನಡೆಯುತ್ತಿರುವ ಶಾಸಕರೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಹೆಚ್ಚಿನ ಅಂತರದ ಮತಗಳಿಂದ ಗೆಲ್ಲಿಸಲು ಹೆಗಲಿಗೆ ಹೆಗಲು ಕೊಡುತ್ತೇನೆ ಎಂದು ಹೇಳಿದ್ದಾರೆ.
ದೇಶದಲ್ಲಿ ದಲಿತರು, ಕ್ರೈಸ್ತ, ಮುಸಲ್ಮಾನರು, ಶೋಷಿತರು ಸೇರಿದಂತೆ ಎಲ್ಲಾ ವರ್ಗದ ಜನರ ವಿಕಾಸಕ್ಕಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ವರ ಹಿತಕ್ಕಾಗಿ ಸಕರಾತ್ಮಕವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರೀಕ್ಷೆಗೂ ಮೀರಿ ತಮ್ಮ ತಂಡದೊಂದಿಗೆ ಶ್ರಮಿಸುತ್ತಿದ್ದಾರೆ. ಅವರ ದೂರದೃಷ್ಟಿಯ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಇಡೀ ಜಗತ್ತು ಭಾರತದತ್ತ ದೃಷ್ಟಿ ಬೀರಿರುವುದು ನನ್ನನ್ನು ಆಕರ್ಷಿಸಿದೆ ಎಂದು ಹೇಳಿದ್ದಾರೆ.
ಆರ್ಥಿಕ ಹಿಂಜರಿತ ಎದುರಾದ ಸಂದರ್ಭದಲ್ಲಿ ದೇಶದ ಜನರು ಯಾವುದೇ ಸಮಸ್ಯೆಗೆ ಒಳಗಾಗದ ರೀತಿಯಲ್ಲಿ ಸಮಸ್ಯೆ ಪರಿಹರಿಸಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಮೋದಿ ಅವರು ಕೈಗೊಂಡ ಕಾರ್ಯಕ್ರಮಗಳನ್ನು ಭಾರತ ಮಾತ್ರವಲ್ಲದೆ ಜಗತ್ತಿನ ಬಲಿಷ್ಟ ರಾಷ್ಟ್ರಗಳು ಕೊಂಡಾಡಿವೆ. ದೇಶದಲ್ಲಿ ಈ ಹಿಂದೆ ನಡೆಯುತ್ತಿದ್ದ ವಿದ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕುವ ಮೂಲಕ ಜನರು ಶಾಂತಿ ನೆಮ್ಮದಿಯಿಂದ ಬದುಕುವಂತ ಅಹ್ಲಾದಕರ ವಾತಾವರಣವನ್ನು ಕಲ್ಪಿಸಿರುವ ಮೋದಿ ಅವರು ಭಾರತದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಕೊಂಡೊಯ್ದಿದ್ದಾರೆ. ಜೊತೆಗೆ ಭಾರತದ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿಸುವ ಮೂಲಕ ಸೇನಾನಿಗಳು ವಿಶ್ವಾಸ ಮತ್ತು ಆತ್ಮಸ್ಥೈರ್ಯದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ನನಗೆ ಮೆಚ್ಚುಗೆಯಾಗಿದೆ ಎಂದಿದ್ದಾರೆ.
ಶಾಸಕರು ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ ಅವರ ಜಿಲ್ಲೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಅದರ ಪರಿಣಾಮ ಮಡಿಕಲ್ ಕಾಲೇಜು ಆರಂಭ, ಕೆರೆಗಳ ಸೌಂದರ್ಯಕರಣ, ನಗರದ ರಸ್ತೆಗಳ ಅಭಿವೃದ್ಧಿ, ನಗರದ ಬೈಪಾಸ್ ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವುದು, ಐಡಿಎಸ್ಜಿ ಕಾಲೇಜು ಅಭಿವೃದ್ಧಿ, ನಗರಸಭೆಗೆ ಹೆಚ್ಚಿನ ಅನುದಾನ, ಕ್ಷೇತ್ರದಲ್ಲಿ ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಸೇರಿದಂತೆ ಸಹಸ್ರಾರು ಕೋಟಿ ರೂ.ಗಳ ಅನುದಾನದೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಟಾನಗೊಳಿಸಿದ್ದಾರೆ. ಇವೆಲ್ಲವನ್ನು ಮೆಚ್ಚಿಕೊಂಡು ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದ್ದಾರೆ.
ಕಾರ್ಯಕರ್ತರು ಮತ್ತು ಪಕ್ಷದ ಸಂಘಟನೆಗೆ ಅವರು ನೀಡುತ್ತಿರುವ ಸಲಹೆ, ಕಾರ್ಯತಂತ್ರ, ಬೆನ್ನು ತಟ್ಟುವ ಕಾರ್ಯ ನನ್ನನ್ನು ಬೆರಗುಗೊಳಿಸಿದೆ ಎಂದಿರುವ ಅವರು, ಕಾಂಗ್ರೆಸ್ ದಲಿತರು, ಮುಸಲ್ಮಾನರು, ಕ್ರಿಶ್ಚಿಯನ್ನರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ. ಅವಕಾಶ ವಂಚಿತರನ್ನಾಗಿ ಮಾಡುತ್ತಿದೆ. ಜೊತೆಗೆ ಹಣವಂತರಿಗೆ ಮಣೆ ಹಾಕುತ್ತಿರುವುದರಿಂದ ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪಕ್ಷ ಸಂಘಟಿಸುವವರಿಗೆ ಮನ್ನಣೆ ಇಲ್ಲದ ಕಾರಣದಿಂದ ಹಾಗೂ ಕಾಂಗ್ರೆಸ್ ವಿರುದ್ಧ ಅನೇಕ ಚಟುವಟಿಕೆಗಳನ್ನು ನಡೆಸಿದ್ದ ತಮ್ಮಯ್ಯ ಅವರಿಗೆ ಟಿಕೇಟ್ ನೀಡಿದ್ದು ಪ್ರತಿಭಟಿಸಿ, ಸ್ವಾಭಿಮಾನಕ್ಕೆ ದಕ್ಕೆ ಬಂದ ಹಿನ್ನಲೆಯಲ್ಲಿ ನಾನು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದ್ದಾರೆ.
ಕಡೂರಿನಲ್ಲಿ ಇತ್ತೀಚೆಗೆ ನಡೆದ ಶಾಸಕ ಬೆಳ್ಳಿ ಪ್ರಕಾಶ್ ಅವರ ಪರ ಮತ ಯಾಚಿಸುವ ರೋಡ್ ಶೋ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ನಾಯಕ ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ, ವಿಧಾನ ಪರಿಷತ್ ಶಾಸಕ ಛಲವಾದಿ ನಾರಾಯಣಸ್ವಾಮಿ, ಶೂದ್ರ ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದೇನೆ ಎಂದು ವಿವರಿಸಿದ್ದಾರೆ.
Appreciated the nationalistic move and joined the BJP