ಮೃತ ವ್ಯಕ್ತಿಯನ್ನು ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ದಿಲೀಪ್ (40) ಎಂದು ಗುರುತಿಸಲಾಗಿದೆ. ಧರ್ಮಸ್ಥಳದಲ್ಲಿ (Dharmasthala) ಮುಡಿ ತೆಗೆಯುವ ಕೆಲಸ ಮಾಡುತ್ತಿದ್ದ ದಿಲೀಪ್ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಜಿರೆಯಲ್ಲಿ (Ujire) ವಾಸವಿದ್ದರು. ಪತ್ನಿಯೊಂದಿಗೆ ತೇಗೂರಿಗೆ ಬಂದಿದ್ದ ದಿಲೀಪ್ ಬುಧವಾರ ಬೈಕ್ನಲ್ಲಿ ಉಜಿರೆಗೆ ಹೊರಟಿದ್ದು, ಕೊಟ್ಟಿಗೆಹಾರ ಸಮೀಪ ಬರುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದರಿಂದ ಪತ್ನಿಯನ್ನು ಬಸ್ಸಿಗೆ ಹತ್ತಿಸಿ ಉಜಿರೆಗೆ ಹೋಗುವಂತೆ ಹೇಳಿದ್ದಾರೆ. ತಾನು ಮಳೆ ನಿಂತ ಮೇಲೆ ಬೈಕಿನಲ್ಲಿ ಬರುವುದಾಗಿ ತಿಳಿಸಿದ್ದಾರೆ.
ಮಳೆ ನಿಂತ ಮೇಲೆ ಬೈಕಿನಲ್ಲಿ ಹೊರಟ ದಿಲೀಪ್ ಮೂಡಿಗೆರೆ ತಾಲೂಕಿನ ಹೆಬ್ಬರಿಗೆ ಸಮೀಪದ ರಸ್ತೆ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಜೊತೆಗಿದ್ದ ಮೊಬೈಲ್ನಿಂದಾಗಿ ಮೃತದೇಹದ ಗುರುತು ಪತ್ತೆಯಾಗಿದೆ. ದಿಲೀಪ್ ಅವರ ಸ್ಕೂಟಿ ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಸಮೀಪ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದಿಲೀಪ್ ಧರ್ಮಸ್ಥಳದಲ್ಲಿ ನೂತನವಾಗಿ ಮನೆಯೊಂದನ್ನು ನಿರ್ಮಿಸಿದ್ದರು. ಮನೆಯ ಗೃಹಪ್ರವೇಶ ಮೇ 5ರಂದು ನಡೆಯಲಿದ್ದು, ಗೃಹಪ್ರವೇಶಕ್ಕೆ ಆಹ್ವಾನಿಸಲೆಂದು ಚಿಕ್ಕಮಗಳೂರಿಗೆ ಬಂದಿದ್ದರು. ಅಲ್ಲಿಂದ ಹಿಂದಿರುಗುವ ವೇಳೆ ಈ ಘಟನೆ ನಡೆದಿದೆ.
ದಿಲೀಪ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸ್ಥಳಕ್ಕೆ ಬಣಕಲ್ ಠಾಣಾ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Husband found dead