ಚಿಕ್ಕಮಗಳೂರು: ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಕಡೆಗಣಿಸಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸುತ್ತಿದ್ದ ಕಾರಣಕ್ಕಾಗಿ ತರೀಕೆರೆ ವಿಧಾನಸಭಾ ಕ್ಷೇತ್ರದ ೮ ಮಂದಿ ಪಕ್ಷದ ಮುಖಂಡರನ್ನು ಜಿಲ್ಲಾ ಕಾಂಗ್ರೆಸ್ ಅಮಾನತುಗೊಳಿಸಿದೆ. ಇದೇ ಕ್ಷೇತ್ರದ ಇಬ್ಬರು ಮಾಜಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಅವರು ಕೆಪಿಸಿಸಿಗೆ ಶಿಫಾರಸ್ಸು ಮಾಡಿದ್ದಾರೆ.
ಜಿ.ಎಚ್. ಶ್ರೀನಿವಾಸ್, ತರೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ. ಅವರ ಪ್ರಚಾರದಲ್ಲಿ ಭಾಗವಹಿಸದೆ, ಸಹಕರಿಸದೆ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಅವರಿಗೆ ಸಹಕರಿಸುತ್ತಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ.
ಈ ಕಾರಣಕ್ಕಾಗಿ, ಪಕ್ಷೇತರ ಅಭ್ಯರ್ಥಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗೋಪಿಕೃಷ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಆರ್. ಧೃವಕುಮಾರ್, ಜಿಪಂ ಮಾಜಿ ಸದಸ್ಯರಾದ ಎಂ.ಕೃಷ್ಣಮೂರ್ತಿ, ಕೆ.ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಎಂ.ಪರಮೇಶ್ವರಪ್ಪ, ತರೀಕೆರೆ ನಗರಾಧ್ಯಕ್ಷ ಟಿ.ಎಸ್.ರಮೇಶ್, ಪ್ರಮುಖರಾದ ಟಿ.ಆರ್.ಬಸವರಾಜು, ಟಿ.ಜಿ.ಶಶಾಂಕ್ ಅವರುಗಳನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತುಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಜಿ ಶಾಸಕರುಗಳಾದ ಎಸ್.ಎಂ.ನಾಗರಾಜು ಮತ್ತು ಟಿ.ಹೆಚ್.ಶಿವಶಂಕರಪ್ಪ ಅವರಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕೆಪಿಸಿಸಿ ಗೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಸಮಾಧಾನಕ್ಕೆ ಕಾರಣ: ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಕೋರಿ ಒಟ್ಟು ೧೩ ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಜಿ.ಎಚ್. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಾಜಿ ಶಾಸಕ ಎಸ್.ಎಂ. ನಾಗರಾಜು ಅವರ ತೋಟದ ಮನೆಯಲ್ಲಿ ಪಕ್ಷದ ಟಿಕೆಟ್ ವಂಚಿತರು ಸಭೆಯನ್ನು ನಡೆಸಿದ್ದರು. ಅಂದಿನ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಕಿ ೮ ಮಂದಿ ಇದ್ದರು.
ಜಿ.ಎಚ್. ಶ್ರೀನಿವಾಸ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರೂ ಕೂಡ ಅವರ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಹೇಳುವ ಜತೆಗೆ ಗೋಪಿಕೃಷ್ಣ ಪಕ್ಷೇತರರಾಗಿ ಸ್ಪರ್ಧೆ ಮಾಡಿದರೆ ಬೆಂಬಲಿಸುವುದಾಗಿ ಬಹಿರಂಗವಾಗಿ ಹೇಳಿದ್ದರು. ಈ ವಿಶ್ವಾಸದ ಮಾತುಗಳಿಂದಾಗಿ ಗೋಪಿಕೃಷ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ತರೀಕೆರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಜಿ.ಎಚ್. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಬಾರದೆಂದು ಅಭ್ಯರ್ಥಿ ಘೋಷಣೆ ಮೊದಲೇ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಪ್ರಯತ್ನ ವಿಫಲವಾಗಿದ್ದರಿಂದ ಟಿಕೆಟ್ ಆಕಾಂಕ್ಷಿಗಳು ಅಸಮಧಾನಗೊಂಡಿದ್ದರು.
Suspension of 8 party leaders of Tarikere Assembly Constituency