ಮೂಡಿಗೆರೆ: ತಮಿಳುನಾಡಿನಲ್ಲಿ 6ಲಕ್ಷ ಹೆಕ್ಟರ್ ಭೂಮಿಯಲ್ಲಿ ಭತ್ತ ಬೆಳೆಯಲು ನೀರಾವರಿಗೆ ಅನುದಾನ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ನೀರಾವರಿ ಯೋಜನೆಗೆ ಅಡ್ಡ ಬಂದಿದ್ದಾರೆ. ಹಿಂದಿನ ಮೂರು ಪ್ರಧಾನಮಂತ್ರಿಗಳು ರಾಜ್ಯದ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕಿದ್ದರಿಂದ ರಾಜ್ಯದಲ್ಲಿ ರೈತರು ಭತ್ತ ಬೆಳೆಯಲು ಸಾಧ್ಯವಾಗದೆ ಗದ್ದೆಯನ್ನು ಪಾಳು ಬಿಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಅವರು ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ ರಾಜ್ಯದಲ್ಲಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ರೈತರ ನೀರಾವರಿ ಯೋಜನೆಗಾಗಿ ಹಾಗೂ ಕುಡಿಯುವ ನೀರಿಗೆ ಅವಕಾಶ ಮಾಡಿಕೊಡಬೇಕೆಂದು ನಾನು ಮನವಿ ಮಾಡಿದ್ದೆ ಈ ಮೂವರು ಪ್ರಧಾನಿಗಳು ಅವಕಾಶ ನೀಡಲಿಲ್ಲ. ತಮಿಳುನಾಡಿನಲ್ಲಿ 40 ಮಂದಿ ಸಂಸದರಿರುವಾಗ ಕರ್ನಾಟಕಕ್ಕೆ ಅನುದಾನ ಬಿಡಲು ನೀಡಲು ಸಾಧ್ಯವಿಲ್ಲ ಎಂದು ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೇಳಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ದೇಶದ ಎಲ್ಲ ರಾಜ್ಯಗಳ ಹಿತ ಕಾಯುವ ಬದ್ದರೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಪ್ರಾದೇಶಿಕ ಪಕ್ಷವನ್ನು ಕಟ್ಟಿಕೊಂಡು ಎರಡು ರಾಷ್ಟ್ರೀಯ ಪಕ್ಷದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಮುಸ್ಲಿಮರು, ಮಹಿಳೆಯರು ಹಾಗೂ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಯನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದೆ. ನಾನು ಯಾರಿಗೂ ದ್ರೋಹ ಮಾಡಿಲ್ಲ. ರೈತರ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಸೇರಿದಂತೆ ರೈತರ ಯಾಂತ್ರಿಕರಣಕ್ಕೆ ಸಹಾಯ ಧನ ನೀಡಿದ್ದೇನೆ. ಪಂಜಾಬಿನಲ್ಲಿ ಒಂದು ಬೆಳೆಗೆ ದೇವೇಗೌಡ ಎಂಬ ಹೆಸರಿಟ್ಟಿದ್ದಾರೆ. ನನಗೂ ಪಂಜಾಬ್ ರಾಜ್ಯಕ್ಕೂ ಸಂಬಂಧವೇ ಇಲ್ಲದಿದ್ದರೂ ಅಲ್ಲಿನ ಜನ ತನ್ನನ್ನು ಗುರುತಿಸಿದ್ದಾರೆ. ತಾನು ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ಹೋಗಬಾರದೆಂದು ತನ್ನನ್ನು ತದೆಯಲಾಗಿತ್ತು ನನ್ನ ಜೀವವನ್ನು ಲೆಕ್ಕಿಸದೆ ಹೋಗಿ ಅಲ್ಲಿನ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದೆ. ನಾನು ಪ್ರಧಾನಿಯಾದ ಕೆಲ ಸಮಯದಲ್ಲಿ ಇಡೀ ದೇಶದ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ತೋರಿಸಿದ್ದೇನೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಇತರೆ ಪಕ್ಷದಿಂದ ಸೇರ್ಪಡೆಯಾಗುತ್ತಿದ್ದಾರೆ. ಅವರಿಗೆ ಮುಂದಿನ ಜಿಪಂ, ತಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನಯಾತ್ರೆ ಆರಂಭಿಸಿ ಚುನಾವಣೆಗೆ ಇಳಿದಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದ ಬಳಿಕ ಪಂಚರತ್ನ ಯೋಜನೆ ಜಾರಿಗೊಳ್ಳಲಿದೆ. ಇದರಲ್ಲಿ ವಿವಿಧ ರೀತಿಯ ಯೋಜನೆಗಳು ಸಾರ್ವಜನಿಕರನ್ನು ತಲುಪಲಿದೆ. ಆಸ್ಪತ್ರೆ, ಶಾಲೆ, ವಸತಿ ಯೋಜನೆಯೆಲ್ಲಿ ಮನೆ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಹೈಟೆಕ್ ಆಸ್ಪತ್ರೆ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪುಗಳ ಸಾಲ ಮನ್ನಾ, ರೈತರಿಗೆ ಅನೇಕ ಸವಲತ್ತುಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರಿಗೆ ನೀವು ಯಾಕೆ ಈ ರೀತಿ ನಡೆದುಕೊಂಡಿದ್ದೀರಿ ಎಂದು ನನಗೆ ಹೇಳಬೇಕು. ನೀವು ತಪ್ಪು ಮಾಡಿದ್ದೀರಂದು ನನಗೆ ಅನ್ನಿಸಿಲ್ಲ. ಆದರೂ ನೀವು ಸಮಜಾಯಿಸಿ ನೀಡಬೇಕು. ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮ ಹೆಗಲಿಗೆ ಹಾಕುತ್ತೇನೆ ಎಂದಾಗ ಭೋಜೇಗೌಡ ಅವರು ದೇವೆಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು,
ಕಾರ್ಯಕ್ರಮದಲ್ಲಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಎಂ.ಎಸ್.ಬಾಲಕೃಷ್ಣ, ಡಿ.ಜೆ.ಸುರೇಶ್, ಅರೇಕೂಡಿಗೆ ಶಿವಣ್ಣ, ಬಿ.ಎಲ್. ರಾಮದಾಸ್, ಶಾಲೀರ್ ಹುಸೇನ್, ಸುಧಾ ಮಂಜುನಾಥ್ ಇತರರಿದ್ದರು,
Former Prime Minister HD Deve Gowda is bored