ಕೊಪ್ಪ: ‘ಟಿ.ಡಿ.ರಾಜೇಗೌಡ ಅವರ ವ್ಯಕ್ತಿತ್ವವನ್ನು ಮೆಚ್ಚಿ ಗೆಲುವು ತಂದು ಕೊಟ್ಟಿದ್ದಾರೆ. ಜನರು ಇಟ್ಟಿರುವ ಭರವಸೆ ಯನ್ನು ಕಾಂಗ್ರೆಸ್ ಪಕ್ಷ ಈಡೇರಿಸಲಿದೆ’ ಎಂದು ಕೆಪಿಸಿಸಿ ವಕ್ತಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಿಜೆಪಿ 40 ಪರ್ಸೆಂಟ್ ಹಣವನ್ನು ಕ್ಷೇತ್ರದಾದ್ಯಂತ ಖರ್ಚು ಮಾಡಿದ್ದರಿಂದ, ನಕರಾತ್ಮಕ ಪ್ರಚಾರಕ್ಕೆ ಒತ್ತುಕೊಟ್ಟಿದ್ದರಿಂದ ಕಾಂಗ್ರೆಸ್ನ ಗೆಲುವಿನ ಅಂತರ ಕಡಿಮೆ ಆಯಿತು’ ಎಂದು ಆರೋಪಿಸಿದರು.
‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಕ್ಷೇತ್ರಕ್ಕೆ ಎರಡು ಬಾರಿ ಪ್ರಚಾರಕ್ಕೆ ಆಗಮಿಸಿದ್ದಾಗಲೂ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಮೋದಿ, ಆದಿತ್ಯನಾಥ್ ಪ್ರಚಾರ ಮಾಡಿದ ಬಹುಭಾಗದಲ್ಲಿ ಕಾಂಗ್ರೆಸ್ ಗೆದ್ದಿದೆ’ ಎಂದು ತಿಳಿಸಿದರು.
‘ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಿ, ಕಾಂಗ್ರೆಸ್ ಕೈಗೆ ಜನರು ರಾಜ್ಯದ ಅಧಿಕಾರ ಕೊಟ್ಟಿದ್ದಾರೆ. ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಹಂಕಾರ ಪಡುತ್ತಿದ್ದ ಬಿಜೆಪಿಯನ್ನು ಜಿಲ್ಲೆಯ 5 ಕ್ಷೇತ್ರದಲ್ಲೂ ಜನರು ಸೋಲಿಸಿದ್ದಾರೆ. ಸಾಮಾನ್ಯ ನಾಗರಿಕನನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನೂ ಹೀನಾಯವಾಗಿ ಸೋಲಿಸಿದ್ದಾರೆ’ ಎಂದರು.
‘ಆಡಳಿತಾ ತ್ಮಕ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ ರಾಜೇಗೌಡ ಅವರು ಮಂತ್ರಿಯಾಗಲಿ ಎಂಬ ಹಾರೈಕೆ ಎಲ್ಲಾ ಧರ್ಮ ಗುರುಗಳ ಹಾರೈಕೆ ಮತ್ತು ಕ್ಷೇತ್ರದ ಜನರ ಆಶಾಭಾವನೆಯಾಗಿದೆ. ಇದನ್ನು ಪಕ್ಷದ ನಾಯಕರು ಪುರಸ್ಕರಿಸುತ್ತಾರೆ ಎಂದು ಭಾವಿಸಿದ್ದೇವೆ’ ಎಂದರು.
ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್ ಮಾತನಾಡಿ, ‘ರಾಜ್ಯದಲ್ಲಿ ಭಯದ ವಾತಾವರಣ ಇತ್ತು, ಅದೀಗ ಹೋಗಿದೆ. 25 ವರ್ಷಗಳ ಹಿಂದೆ 5 ಕ್ಷೇತ್ರಗಳನ್ನು ಜಿಲ್ಲೆಯಲ್ಲಿ ಗೆದ್ದಿದ್ದೆವು, ಈ ಬಾರಿ ಗೆಲುವು ಮರುಕಳಿಸಿದೆ. ಜೀವರಾಜ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದರು. ಅದಕ್ಕೆ ತೆರೆ ಬಿದ್ದಿದೆ’ ಎಂದು ದೂರಿದರು.
ಪಕ್ಷದ ಮುಖಂಡರಾದ ಎಚ್.ಶಶಿಕುಮಾರ್, ಅನ್ನಪೂರ್ಣ ನರೇಶ್, ಲಕ್ಷ್ಮೀನಾರಾಯಣ, ಎಚ್.ಎಸ್.ಇನೇಶ್, ನುಗ್ಗಿ ಮಂಜುನಾಥ್, ನವೀನ್ ಮಾವಿನಕಟ್ಟೆ, ಬಿ.ಪಿ.ಚಿಂತನ್, ಶಿವಕುಮಾರ್ ಕರುವಾನೆ, ಶಿವಶಂಕರ್, ನಾರ್ವೆ ಸಾದಿಕ್, ಓಣಿತೋಟ ರತ್ನಾಕರ್, ಬರ್ಕತ್ ಆಲಿ, ರಾಜಶಂಕರ್, ದುರ್ಗಾಚರಣ್, ಸತೀಶ್, ಜೇಸುದಾಸ್, ಜೆ.ಎಂ.ಶ್ರೀಹರ್ಷ, ಸಂತೋಷ್ ಕುಲಾಸೊ, ವಿಜಯಕುಮಾರ್, ರಶೀದ್ ಇದ್ದರು.
T.D. Rajegowda has brought victory by appreciating his personality