ಚಿಕ್ಕಮಗಳೂರು: ನಗರಸಭೆ ಆಯುಕ್ತರ ಕಚೇರಿಗೆ ಹೊಂದಿಕೊಂಡಂತೆ ಗೋಡೆಗೆ ದೂರು ಪೆಟ್ಟಿಗೆಯೊಂದನ್ನು ಇಡಲಾಗಿದ್ದು, ಅದನ್ನು ಉಪಲೋಕಾಯುಕ್ತರು ಪರಿಶೀಲಿಸಿದರು.
ಅದಕ್ಕೆ ಹಾಕಿರುವ ಬೀಗ ತೆರೆಯುವಂತೆ ಕಚೇರಿ ವ್ಯವಸ್ಥಾಪಕ ರವಿ ಅವರಿಗೆ ಸೂಚನೆ ನೀಡಿದರು. ದೂರು ಪೆಟ್ಟಗೆ ಕೀಲಿ ಕಳೆದುಹೋಗಿದೆ ಎಂದು ಅವರು ಉತ್ತರ ನೀಡಿದರು. ರಿಪೇರಿ ಮಾಡುವ ಕೆಲಸಗಾರನ್ನು ಕರೆಸಿ ಲಾಕರ್ ಒಡೆದು ಪರಿಶೀಲಿಸಲಾಯಿತು. 2020ರಿಂದ ಈವರೆಗೆ ಸಾರ್ವಜನಿಕರು ಹಾಕಿರುವ ದೂರುಗಳು ಅದರಲ್ಲೇ ಇರುವುದನ್ನು ಕಂಡು ಉಪಲೋಕಾಯುಕ್ತರು ಸಿಡಿಮಿಡಿಗೊಂಡರು.
‘ಉದ್ಘಾಟನೆಯಾದ ದಿನದಿಂದ ಈ ಪೆಟ್ಟಿಗೆಯನ್ನು ತೆಗೆದಂತೆ ಕಾಣಿಸುತ್ತಿಲ್ಲ. ಅದರಲ್ಲಿರುವ ಪತ್ರಗಳು ದೂಳು ಹಿಡಿದಿವೆ. ಈ ರೀತಿಯ ಬೇಜವಾಬ್ದಾರಿ ಅಧಿಕಾರಿಗಳನ್ನು ನಾನೆಲ್ಲೂ ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಬೀಗವನ್ನೇ ತೆರೆಯದ ದೂರು ಪೆಟ್ಟಿಗೆಯನ್ನು ಇರಿಸಿರುವುದಾದರೂ ಏಕೆ, ಈಗಲೇ ಈ ಪೆಟ್ಟಿಗೆ ತೆಗೆದು ಹೊಸ ಪೆಟ್ಟಿಗೆ ಇರಿಸಿ. ಇಲ್ಲಿರುವ ಪತ್ರಗಳನ್ನು ಪರಿಶೀಲಿಸಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು’ ಎಂದು ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ತಿಳಿಸಿದರು.
‘ನಗರಸಭೆ ಕಚೇರಿಯಲ್ಲಿ ಕಾರ್ಯವಿಧಾನದ ಹಲವು ಲೋಪಗಳಿವೆ. ಪ್ರಾಥಮಿಕವಾಗಿ ಕಂಡಿರುವ ಲೋಪಗಳನ್ನು ಆಧರಿಸಿ ಸಮಗ್ರವಾಗಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡಿ’ ಎಂದು ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ 85 ಪ್ರಕರಣಗಳ ಪೈಕಿ 65 ಪ್ರಕರಣಗಳನ್ನು ಗುರುವಾರ ಜಿಪಂ ಸಭಾಂಗಣದಲ್ಲಿ ನಡೆದ ಕಲಾಪದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಬಂದಿರುವ ಪ್ರಕರಣಗಳ ಬಗ್ಗೆ ಮೊದಲೇ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೆವು. ಎಲ್ಲಿಯಾದರೂ ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಇದೇ ಕಾರಣದಿಂದಲೇ ಸ್ಥಳದಲ್ಲೇ 65 ಪ್ರಕರಣಗಳ ಇತ್ಯರ್ಥ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
Complaint box that hasn’t been opened for 5 years
