ಚಿಕ್ಕಮಗಳೂರು: ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ದಿಲೀಪ್‌ಕುಮಾರ್ ಅವಿರೋಧ ಆಯ್ಕೆಯಾದರು.
ಇಂದು ನಡೆದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ದಿಲೀಪ್‌ಕುಮಾರ್‌ರವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರುದ್ರಪ್ಪ ಘೋಷಿಸಿದರು.
ನೂತನ ಅಧ್ಯಕ್ಷ ದಿಲೀಪ್‌ಕುಮಾರ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್‌ರವರು ನೀಡಿದ ಸಂವಿಧಾನದ ಆಶಯದಂತೆ ಇಂದು ಸರ್ವಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ಸಿಕ್ಕಿರುವ ಅಲ್ಪಾವಧಿಯಲ್ಲಿ ಕುಡಿಯುವ ನೀರು, ಸ್ವಚ್ಚತೆ, ನಿವೇಶನ, ಮನೆ ರಹಿತ ಬಡವರ ಪರವಾಗಿ ಆದ್ಯತೆ ಮೇಲೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಜನರ ಸೇವೆಗೆ ಸದಾ ಸಿದ್ದವಿದ್ದು, ಅವರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ತಾಯಿ ದೇವಿರಮ್ಮನ ಮೇಲೆ ಪ್ರಮಾಣ ಮಾಡಿದರು. ಮಾಜಿ ಅಧ್ಯಕ್ಷ ಸತೀಶ್ ಮತನಾಡಿ, ಸಿಕ್ಕಿರುವ ಕಡಿಮೆ ಅವಧಿಯಲ್ಲಿ ನೂತನ ಅಧ್ಯಕ್ಷರು ಉತ್ತಮ ಕೆಲಸ ಮಾಡಲಿ ಎಂದು ಆಶಿಸುತ್ತ ಶುಭ ಹಾರೈಸುತ್ತೇನೆ ಎಂದರು.
ಗ್ರಾಮ ಪಂಚಾಯಿತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಜನಪರ ಆಡಳಿತ ನೀಡಲು ಸಲಹೆ ನೀಡಿದ ಅವರು, ಕುಡಿಯುವ ನೀರು, ಸ್ವಚ್ಚತೆ ಹಾಗೂ ಸರ್ಕಾರದ ಮೇಲೆ ಒತ್ತಡವನ್ನು ನಿವೇಶನ ಮತ್ತು ಮನೆ ರಹಿತರಿಗೆ ಸ್ಪಂದಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಉಪಾಧ್ಯಕ್ಷೆ ಪಲ್ಲವಿ ನಿವೇಶ್‌ಗೌಡ ಮಾತನಾಡಿ, ತಾವು ಅಧಿಕಾರದ ಅವಧಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ನೂತನ ಅಧ್ಯಕ್ಷರು ಪೂರ್ಣಗೊಳಿಸುತ್ತಾರೆಂಬ ವಿಶ್ವಾಸವಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪಂಚಾಯಿತಿಯಲ್ಲಿ ೨೦೦ ಮನೆ ಮಂಜೂರಾಗಿದ್ದು, ಹಾಲಿ ರಾಜ್ಯಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಿದರು. ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪಂಚಾಯಿತಿ ಅಧ್ಯಕ್ಷರು ಶ್ರಮಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕಾವ್ಯ ಮೋಹನ್‌ಕುಮಾರ್, ಸದಸ್ಯರುಗಳಾದ ಲಲಿತಾ, ಪುಟ್ಟಮ್ಮ, ತಮ್ಮೇಗೌಡ, ದಿನೇಶ್ ಎಂ.ಕೆ, ಯತೀಶ್, ಅನುಷಾ, ಸಂದೀಪ್, ದಿಲೀಪ್‌ಕುಮಾರ್, ಶಶಿಕಲಾ ಪಟ್ಟಸ್ವಾಮಿ, ಪ್ರೇಮ ಶಿವಕುಮಾರ್, ಕೆ.ಆರ್ ರವಿಕುಮಾರ್, ಸುನೀತ ಸ್ವಾಮಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಶ್ಮಿತಾಗೌಡ ಉಪಸ್ಥಿತರಿದ್ದರು.
Dilip Kumar elected unopposed as the new president of Mallenahalli Gram Panchayat
