ಚಿಕ್ಕಮಗಳೂರು: ರೋಗಿಗಳಿಗೆ ಚಿಕಿತ್ಸೆ ನೀಡುವುದು ಸುಲಭದ ಕೆಲಸವಲ್ಲ. ವೈದ್ಯರಿಂದ ಜನ ತುಂಬಾ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆರೋಗ್ಯದಲ್ಲಿ ಹೆಚ್ಚು ಕಮ್ಮಿ ಆದಲ್ಲಿ ಆರೋಪವನ್ನು ಎದುರಿಸಬೇಕಾತ್ತದೆ. ಈ ಎಲ್ಲ ಒತ್ತಡದ ಮಧ್ಯೆ ಕಾರ್ಯನಿರ್ವಹಿಸುವ ವೈದ್ಯ ಸಿಬ್ಬಂದಿ ಕಾರ್ಯ ಅವಿಸ್ಮರಣೀಯ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ, ವೈದ್ಯಕೀಯ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅರಳಗುಪ್ಪೆ ಮಲ್ಲೇಗೌಡ ಬೋಧಕ ಜಿಲ್ಲಾ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಹೊರರೋಗಿಗಳ ವಿಭಾಗದ ಕಟ್ಟಡವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಕೆಲಸ ಮಾಡುವುದೇ ಎಲ್ಲ ರಾಜಕಾರಣಿಗಳ ಕೆಲಸವಾಗಿದೆ. ಜನಸೇವೆ ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ನಮ್ಮಿಂದಲೂ ಕೆಲವು ಸಲ ತಪ್ಪಾಗುತ್ತವೆ. ಎಲ್ಲರ ಸಮಸ್ಯೆಗಳನ್ನು ಪರಿಹರಿಸಲು ಸರಕಾರದಿಂದ ಸಾಧ್ಯವಿಲ್ಲ. ಆದರೆ, ಎಲ್ಲರಿಗೂ ಒಳ್ಳೆಯದಾಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಎಲ್ಲವನ್ನೂ ಸರಕಾರದಿಂದಲೇ ಮಾಡಲಾಗದು ಅಂದಿನ ಕಾಲದಲ್ಲೇ ಮಲ್ಲೇಗೌಡ ಎಂಬುವರು ಆಸ್ಪತ್ರೆಗೆ ಜಾಗ ದಾನಮಾಡುವ ಮೂಲಕ ಜಿಲ್ಲೆಯಲ್ಲಿ ದಾನಿಗಳ ಪರಂಪರೆ ಹುಟ್ಟುಹಾಕಿದ್ದಾರೆ. ಆರ್ಥಿಕವಾಗಿ ಉತ್ತಮವಾಗಿರುವವರು ದಾನ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಆರೋಗ್ಯವೇ ಭಾಗ್ಯ, ಅರ್ಧ ಕಾಯಿಲೆ ಔಷಧಿ ಮಾತ್ರೆಯಿಂದ ವಾಸಿಯಾದರೆ, ವೈದ್ಯ ಸಿಬ್ಬಂದಿಯ ನಡವಳಿಕೆಯಿಂದ ಅರ್ಧ ಕಾಯಿಲೆ ವಾಸಿಯಾಗುತ್ತದೆ. ವೈದ್ಯರಿಗೆ ಒತ್ತಡ ಇರಬಹುದು, ಅದರ ನಡುವೆಯೂ ಬಹಳ ಸಹನೆ, ವಿಶ್ವಾಸದಿಂದ ಚಿಕಿತ್ಸೆ ನೀಡಿ, ಸುಸಜ್ಜಿತ ಆಸ್ಪತ್ರೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಿ.ಟಿ.ರವಿ, ಎಚ್.ಡಿ.ತಮ್ಮಯ್ಯ ಜುಗಲ್‌ಬಂಧಿ
ಶಾಸಕ ಎಚ್.ಡಿ.ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುವ ಮೂಲಕ ವೇದಿಕೆ ಜುಗಲ್‌ಬಂದಿಗೆ ಕಾರಣವಾಯಿತು.
ಸಿ.ಟಿ.ರವಿ ಮಾತನಾಡುವಾಗ ಚಿಕ್ಕಮಗಳೂರಿನ ಹೆಬ್ಬಾಗಿಲಲ್ಲಿರುವ ಬಸವನಹಳ್ಳಿ ಕೆರೆಗೆ ನಮ್ಮ ಅಧಿಕಾರವಧಿಯಲ್ಲಿ ಅನುದಾನವಿಟ್ಟು ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಅಲ್ಲಿ ಅವ್ಯವಹಾರದ ಆರೋಪ ಮಾಡಿ, ಕೆರೆ ಕಾಮಗಾರಿ ನಿಲ್ಲಿಸಿದ್ದಾರೆ ಎಂದು ಪರೋಕ್ಷವಾಗಿ ತಮ್ಮಯ್ಯ ಅವರನ್ನು ತಿವಿದರು.
ಚಿಕ್ಕಮಗಳೂರಿಗೆ ಬಸವನಹಳ್ಳಿ ಕೆರೆ ಮುಕುಟವಿದ್ದಂತೆ, ಹೀಗಾಗಿ ಚಿಕ್ಕಮಗಳೂರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರಿಗೆ ದೂರಿದರು. ಅಲ್ಲದೆ ವಸತಿ ಯೋಜನೆಗಳು ನೆನಗುದಿಗೆ ಬಿದ್ದಿವೆ, ಅದಕ್ಕೆ ಚುರುಕು ಮುಟ್ಟಿಸಿ ಎಲ್ಲರಿಗೂ ಮನೆ ನಿರ್ಮಿಸಿಕೊಡಿ ಎಂದರು.
ಬೇಲೂರು ಹಾಸನ ರೈಲ್ವೇ, ರಸ್ತೆ ಅಭಿವೃದ್ಧಿ, ಏರ್‌ಸ್ಟ್ರಿಫ್, ಮೆಡಿಕಲ್ ಕಾಲೇಜಿಗೆ ಶಾಶ್ವತ ಅಸಿಸ್ಟೆಂಟ್ ಪ್ರೊಫೆಸರ್ ನೇಮಕ ಮಾಡುವಂತೆ ಆಗ್ರಹಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ತಮ್ಮ ಭಾಷಣದಲ್ಲಿ, ಹೊಟ್ಟೆ ನೋವಿಗೆ ವೈದ್ಯರು ಔಷಧಿ ನೀಡುತ್ತಾರೆ. ಆದರೆ ಅಸೂಯೆ ಮತ್ತು ಹೊಟ್ಟೆಕಿಚ್ಚಿಗೆ ಮದ್ದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿಪಡಿಸಿರುವುದನ್ನು ಶಾಸಕರು ತೋರಿಸಲಿ ಎಂದು ಹೇಳಿದ್ದಾರೆ.
ಮೂರು ವರ್ಷ ಕಳೆಯಲಿ ನೂರು ರಸ್ತೆ ಬೇಕಿದ್ದರೆ ತೋರಿಸುತ್ತೇನೆ. ೨ ವರ್ಷದಲ್ಲಿ ಡಾಕ್ಟರ್ ಓದಲು ಆಗುವುದಿಲ್ಲ, ೫ ವರ್ಷ ಆಗಲೇಬೇಕು. ಹಾಗೆಯೇ ಜನಪ್ರತಿನಿಧಿ ಆದವನಿಗೆ ೫ ವರ್ಷ ಅವಕಾಶ ಇರುತ್ತದೆ. ಆಗ ನಾನು ಅಭಿವೃದ್ಧಿ ಕಾರ್ಡ್ ಹಿಡಿದು ಜನರ ಬಳಿಗೆ ಬರುತ್ತೇನೆ ಎಂದು ಸಿ.ಟಿ.ರವಿಗೆ ಟಾಂಗ್ ನೀಡಿದರು.
ಅಭಿವೃದ್ಧಿ ವಿಚಾರದಲ್ಲಿ ಪಕ್ಷ, ಜಾತಿ, ಬೇಧ ಮಾಡುವುದಿಲ್ಲ. ಪ್ರೀತಿಯ ರಾಜಕಾರಣದಿಂದ ಎಲ್ಲರನ್ನೂ ಗೆಲ್ಲಬಹುದು ಅಸೂಯೆ ಹೊಟ್ಟೆಕಿಚ್ಚಿನಿಂದ ಗೆಲ್ಲಲಾಗದು ಎಂದು ಹೇಳಿದರು.
ಶಿವಮೊಗ್ಗ ಕಾಡಾ ನಿಗಮದ ಅಧ್ಯಕ್ಷ ಡಾ.ಅಂಶುಮಂತ್, ಕೃಷಿ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಗ್ಯಾರಂಟಿ ಅಧ್ಯಕ್ಷ ಶಿವಾನಂದಸ್ವಾಮಿ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿ.ಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್ಪಿ ಡಾ.ವಿಕ್ರಂ ಅಮಟೆ, ಮೆಡಿಕಲ್ ಕಾಲೇಜ್ ಡೀನ್ ಡಾ,ಹರೀಶ್, ಜಿಲ್ಲಾಸರ್ಜನ್ ಡಾ.ಮೋಹನ್‌ಕುಮಾರ್, ಡಿಎಚ್‌ಒ ಡಾ.ಅಶ್ವಥ್ ಬಾಬು ಮತ್ತಿತರರಿದ್ದರು. ಡಾ.ಸಾಲಿಮಠ ಸ್ವಾಗತಿಸಿ, ಜಲಜಾಕ್ಷಿ ನಿರೂಪಿಸಿದರು.
Doing public work is the job of all politicians.
